Saturday, April 26, 2014

ಈರುಳ್ಳಿ ಬೆಂಡೆಕಾಯಿ ಪಕೋಡ: Onion Okra Pakoda: Bendekaayi pakoda


ಈರುಳ್ಳಿ ಬೆಂಡೆಕಾಯಿ ಪಕೋಡ:

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ - 7-8
ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಅದನ್ನು ಸಣ್ಣಗೆ ತುಂಬಾ (ದಪ್ಪ ಹೋಳುಗಳನ್ನಾಗಿ ಹೆಚ್ಚದೆ) ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ(ಥಿನ್ ಸ್ಲ್ಯೆಸ್ ತರಹ)
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು  ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಹೆಚ್ಚಿದ ಬೆಂಡೆಕಾಯಿಯ ಸಣ್ಣ ಹೋಳುಗಳು  ಸೇರಿಸಿ, ಅಕ್ಕಿಹಿಟ್ಟು ಸ್ವಲ್ಪ ಒಂದು / ಎರಡು ಚಮಚದಷ್ಟು, ಕಡ್ಲೆಹಿಟ್ಟು ಹೇಗೆ  ತಗೋತಿರೋ ಅದರ ಅಳತೆ ನೋಡಿಕೊಂಡು ಹಾಕಿ. ಹಾಗೂ ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಗಟ್ಟಿಯಾಗಿ ಇರಲಿ. ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗೂ ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

*ಟಮೋಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

* ಸಾಮಾನ್ಯವಾಗಿ ಮಕ್ಕಳು ಬೆಂಡೆಕಾಯಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಬೆಂಡೆಕಾಯಿ ಕೆಲವು ಮಕ್ಕಳಿಗೆ ಇಷ್ಟವಾಗುತ್ತದೆ . ತಿನ್ನದೆ ಇರುವ ಮಕ್ಕಳಿಗೆ ಈ ರೀತಿ ಪಕೋಡ ತರಹ ತಯಾರಿಸಿಕೊಟ್ಟರೆ ಸುಮ್ಮನೆ ತಿನ್ನುತ್ತಾರೆ. ಅಲ್ಲದೇ ಅದಕ್ಕೆ ಬೆಂಡೆಕಾಯಿ ಸೇರಿಸಿದಿವಿ ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಇಲ್ಲ ಅಂದರೆ ಗೊತ್ತಾಗುವುದಿಲ್ಲ.
* ಎಲ್ಲರಿಗೂ ತಿಳಿದಿರುವಂತೆ ಬೆಂಡೆಕಾಯಿ ಆರೋಗ್ಯಕ್ಕೆ ಅತ್ತ್ಯುತ್ತಮವಾದ ತರಕಾರಿ, ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ, ಬುದ್ಧಿಶಕ್ತಿಗೆ, ಮೆಮೋರಿಗೆ ಒಳ್ಳೆಯದು.

Wednesday, October 2, 2013

Bisi Bhele Bhath Powder : ಬಿಸಿಬೇಳೆಬಾತ್ ಪುಡಿ

ಬಿಸಿಬೇಳೆಬಾತ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು

ಕಡಲೆಕಾಳು- 1 ಟೀಚಮಚ
ಉದ್ದಿನಬೇಳೆ- 1 ಟೀಚಮಚ
ಧನಿಯ- 1/2 ಚಮಚ
ಜೀರಿಗೆ- 1 ಚಮಚ
ಮೆಣಸು- 5
ಒಣ ಮೆಣಸಿನಕಾಯಿ- 2
ಗಸಗಸೆ- 1 ಟೀಚಮಚ
ಒಣಕೊಬ್ಬರಿ- 1 ಟೀಚಮಚ
ಅಕ್ಕಿ- 1/2 ಟೀ ಚಮಚ
ಅರಿಶಿಣ- 1/4 ಟೀ ಚಮಚ
ಸಾಸಿವೆ- 1/2 ಟೀಚಮಚ
ದಾಲ್ಚಿನ್ನಿ- 1
ಏಲಕ್ಕಿ- 1
ಲವಂಗ-1
ಮೆಂತ್ಯೆ- ಸ್ವಲ್ಪ
ಕರಿಬೇವು- ಸ್ವಲ್ಪ
ಇಂಗು- 1/4 ಟೀಚಮಚ

ಮೇಲೆ ತಿಳಿಸಿರುವ ಎಲ್ಲಾ ಸಮಾಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.  ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ಬಿಸಿಬೇಳೆಬಾತ್ ತಯಾರಿಸುವಾಗ ಬೇಳೆ ಮತ್ತು ಅಕ್ಕಿಯನ್ನು ಬೇಯಿಸಿಕೊಂಡು, ಈ ಪುಡಿಯನ್ನು ಉಪಯೋಗಿಸಿ.

Tuesday, August 6, 2013

Holige / obbattu - "ಹೋಳಿಗೆ"

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  
ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.

* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! 


"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ಹೋಳಿಗೆಯನ್ನು ತಯಾರಿಸಲು ಹೋಳಿಗೆ / ಒಬ್ಬಟ್ಟು ಲೇಬಲ್ ನಲ್ಲಿ ನೋಡಿ.
ಅಥವಾ ಈ ಲಿಂಕ್ ಅನ್ನು ನೋಡಿ. ಅದರಲ್ಲಿ ನಿಮಗೆ ಹೋಳಿಗೆ / ಒಬ್ಬಟ್ಟು ತಯಾರಿಸುವ ರೀತಿ ಮತ್ತು ಹೋಳಿಗೆ ಸಾರು ತಯಾರಿಸುವ ರೀತಿ ಎಲ್ಲವನ್ನು ಸವಿವರವಾಗಿ ತಿಳಿಸಲಾಗಿದೆ, ಓದಿ ನೋಡಿ, ನಿಮ್ಮ ಮನೆಯಲ್ಲಿಯೂ ರುಚಿಯಾದ ಹೋಳಿಗೆ ತಯಾರಿಸಿ ಹಬ್ಬದ ಊಟವನ್ನು ಸವಿಯಿರಿ.
ವರಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು.
http://indiankannadarecipes.blogspot.in/2011/08/holige-obbattu-saaru.html

Sunday, September 18, 2011

Tomato Chutni - ಟಮೋಟ ಚಟ್ನಿ:

ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

ಟಮೋಟ - ಅರ್ಧ ಕೆ.ಜಿ
ಈರುಳ್ಳಿ - ಎರಡು
ಬೆಳ್ಳುಳ್ಳಿ - ಹತ್ತು ಎಸಳು
ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ಹುಣಸೆಹಣ್ಣು - ಚಿಕ್ಕ ಗೋಲಿ ಗಾತ್ರ
ಉಪ್ಪು ರುಚಿಗೆ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಎರಡು/ನಾಲ್ಕು ಚಮಚ
ಸಾಸಿವೆ,ಜೀರಿಗೆ,ಇಂಗು
ಉದ್ದಿನಬೇಳೆ - ಒಂದು ಚಮಚ

ತಯಾರಿಸುವ ವಿಧಾನ:
ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ,ಕಾದ ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ,ಅದಕ್ಕೆ ಹೆಚ್ಚಿದ ಟಮೋಟಗಳನ್ನು ಹಾಕಿ,ಸ್ವಲ್ಪ ಮೆತ್ತಗಾಗುವಂತೆ ಬೇಯಿಸಿ,ಬೆಂದ ಮೇಲೆ ಒಲೆಯಿಂದ ಇಳಿಸಿ,ಅದರ ಜೊತೆಗೆ ಕೊತ್ತುಂಬರಿಸೊಪ್ಪು,ಕರಿಬೇವು,ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ,ಮಿಕ್ಸಿಗೆ ಹಾಕಿ ಅರೆಯಿರಿ.ನೀರು ಅವಶ್ಯಕತೆ ಇಲ್ಲ,ತುಂಬಾ ನುಣ್ಣಗೆ ರುಬ್ಬಬೇಕಾಗಿಲ್ಲ.
ನಂತರ ಒಗ್ಗರಣೆ ಹಾಕಿ, ಅರೆದಿರುವ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ,ಹಸಿವಾಸನೆ ಹೋಗುವವರೆಗೂ, ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ,ಮಧ್ಯೆ ತಿರುಗಿಸುತ್ತಿರಿ,ತಳಹತ್ತದಂತೆ ನೋಡಿಕೊಂಡು ಗಟ್ಟಿಯಾದ ನಂತರ ಇಳಿಸಿ.
ಇದು ದೋಸೆ,ಇಡ್ಲಿ,ಚಪಾತಿ ಮತ್ತು ಪಕೋಡಗಳಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಬ್ರೆಡ್ ಸ್ಲೈಸ್ ಮಧ್ಯೆ ಹಚ್ಚಿಕೊಂಡು ಟೋಸ್ಟ್ ಮಾಡಿಕೊಂಡು ಸಹ ತಿನ್ನಬಹುದು. ಟೋಸ್ಟ್ ಮಾಡದೆಯೂ ತಿನ್ನಬಹುದು.

Monday, August 29, 2011

Kadubu - Karjikayi - Holige : ಶ್ರೀ ಸಿದ್ಧಿವಿನಾಯಕ ಗಣಪತಿ

 ಶ್ರೀ ಗೌರಿ ಮತ್ತು ಶ್ರೀ ಗಣೇಶ ಹಬ್ಬದ ಶುಭಾಷಯಗಳು.

ಶ್ರೀ ಸಿದ್ಧಿವಿನಾಯಕ ಗಣಪತಿ
                        
                                              ಮುಂಬಯಿ ನಗರದ ಶ್ರೀ ಸಿದ್ಧಿವಿನಾಯಕ ಗಣಪತಿ

 ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದಾ ||


ಶ್ರೀ ಸಿದ್ಧಿವಿನಾಯಕ ಗಣಪತಿಗಾಗಿ ಕಡುಬನ್ನು ತಯಾರಿಸುತ್ತೇವೆ. ಗಣೇಶನು ಕಡುಬು ಪ್ರಿಯನು.ಮೋದಕ ಪ್ರಿಯನು ಸಹ. ಕುರುಕುತಿಂಡಿಯೂ ಸಹ ಆತನಿಗೆ ಅಚ್ಚುಮೆಚ್ಚು.

ಕುರುಕು ತಿಂಡಿಗೆ ಲೇಬಲ್ ನಲ್ಲಿರುವ  SNACKS  ಲಿಂಕ್ ನೋಡಿ.

Chakkuli
Kodubale - Spicy Rings

ಕಡುಬಿನ ರೆಸಿಪಿಗಾಗಿ  ಇಲ್ಲಿ ತಿಳಿಸಿರುವ ಲಿಂಕ್ ಅನ್ನು ನೋಡಿ.

Khara Kadubu - Hesarubele kadubu- Moongdal Kadubu
Karida Kadubu - Karigadubu
Karjikaayi - Sweet kadubu
Kadubina Hittu
Sihi Kadubu

ಮೇಲೆ ತಿಳಿಸಿರುವ ಲಿಂಕ್ ನಲ್ಲಿ, ಅಕ್ಕಿಹಿಟ್ಟು/ಕಡುಬಿನ ಮುದ್ದೆ ತಯಾರಿಸುವ ರೀತಿ, ಖಾರ ಕಡುಬು, ಸಿಹಿ ಕಡುಬು, ಕರ್ಜಿಕಾಯಿ, ಕರಿದ ಕಡುಬು ಅಥವಾ ಕರಿಗಡುಬು ಈ ಅಡಿಗೆಗಳನ್ನು ವಿವರವಾಗಿ ಬರೆಯಲಾಗಿದೆ.
ಗೌರಿ ಹಬ್ಬಕ್ಕಾಗಿ ಹೋಳಿಗೆ/ಒಬ್ಬಟ್ಟು ವಿಶೇಷತೆ , ಅದನ್ನು ಹೋಳಿಗೆ/ ಒಬ್ಬಟ್ಟು ಲೇಬಲ್ ನಲ್ಲಿ ನೋಡಿ.
Holige - obbattu

Wednesday, August 17, 2011

Rave Unde- Rava laddu-Soji Laddu

Sree Krishna Janmastami Special
Happy Krishnaastami


Rave Unde - Click this link:

Kadubu-ಕಡುಬು

ಕಡುಬು ತಯಾರಿಸುವ ವಿಧಾನವನ್ನು ತಿಳಿಯಲು ಲೇಬಲ್ಸ್ ನಲ್ಲಿ ಕಡುಬು ಕ್ಲಿಕ್ ಮಾಡಿನೋಡಿ.

Thursday, August 4, 2011

Holige & Obbattu Saaru - ಹೋಳಿಗೆ & ಹೋಳಿಗೆ ಸಾರು:

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  
ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.

* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! 


"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ತೊಗರಿಬೇಳೆ ಹೋಳಿಗೆ:

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ - ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.

ನಂತರ ತೊಗರಿಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ನೀರು ಹೆಚ್ಚಾಗಿ ಹಾಕಿ, ಆ ಬಸಿದ ರಸದಿಂದ ಸಾರು ತಯಾರಿಸಬಹುದು. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ತೊಗರಿಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು  ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.

--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.

•ಈಗ ಹೋಳಿಗೆ ಹೇಗೆ ಮಾಡೋದು ತಿಳಿಯೋಣ:


•ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
•ಹೂರಣದ ಮಿಶ್ರಣವನ್ನು ಕಿತ್ತಳೆ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
•ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ,ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿ.

ಆಮೇಲೆ  ಹೂರಣವನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ.

ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು,ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ  ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ.

ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ,ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ,ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು  ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ,ಪ್ರಸಿದ್ಧಿ ಪಡೆದಿರುವ ಅಡಿಗೆ.


•ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
•ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
•ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
•ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
•ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
•ಬೇಳೆ ಬಸಿದ ನೀರನ್ನು ಚೆಲ್ಲದೆ ಅದನ್ನು ಹೋಳಿಗೆ ಸಾರಿನಂತೆ ಉಪಯೋಗಿಸಿ,ಈ ಸಾರು ತುಂಬಾ ರುಚಿ ಮತ್ತು ಪೌಷ್ಠಿಕ ವಾಗಿರುತ್ತದೆ. ಏಕೆಂದರೆ ರಸದಲ್ಲೆ ಸಾರವೆಲ್ಲ  ಇರುವುದರಿಂದ ಬರೀ ಬೇಳೆಯಲ್ಲಿ ಏನು ಇರುವುದಿಲ್ಲ.

ಹೋಳಿಗೆ ಸಾರಿನ ರೆಸಿಪಿ:


ಹೋಳಿಗೆ /ಒಬ್ಬಟ್ಟಿನ ಸಾರು:

ಬೇಳೆ ಕಟ್ಟು ತೆಗೆಯುವ ವಿಧಾನವು ಹೋಳಿಗೆ ರೆಸಿಪಿಯಲ್ಲಿ ಇದೆ. ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು.ಬೇಳೆಯೂ ಕರಗದಂತೆ ಬೇಯಿಸಿ,ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ.ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು"ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ,ಬೆರೆಸಿ,ಒಲೆ ಮೇಲಿಟ್ಟು ಕುದಿಸಿ,ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು
ಕರಿಬೇವು ಎಸಳು - ಎರಡು

ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ
ಈರುಳ್ಳಿ - ಒಂದು
ಬೆಳ್ಳುಳ್ಳಿ ಐದಾರು ಎಸಳು
ತೆಂಗಿನಕಾಯಿ ತುರಿ ಸ್ವಲ್ಪ
ಹುಣಸೇಹಣ್ಣು / ಹುಣಸೇರಸ(ಪಲ್ಪ್)
ಕೊತ್ತುಂಬರಿಸೊಪ್ಪು ಸ್ವಲ್ಪ
ಎಣ್ಣೆ / ತುಪ್ಪ
ಸಾಸಿವೆ, ಕರಿಬೇವು
ಇಂಗು,ಜೀರಿಗೆ
ಉಪ್ಪು



ಹುರಿದು ಮಸಾಲೆಪುಡಿ ಮಾಡಿಕೊಳ್ಳಬೇಕಾದ ಸಾಮಗ್ರಿಗಳು:

ಒಣಮೆಣಸಿನಕಾಯಿ ರುಚಿಗೆ
ಧನಿಯಾ - ಎರಡು ದೊಡ್ಡ ಚಮಚಗಳು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಕಾಲು ಚಮಚ
ಮೆಂತ್ಯ - ಕಾಲು ಚಮಚ
ಸಾಸಿವೆ - ಕಾಲು ಚಮಚ
ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ.
ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ.
ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.
ತೆಂಗಿನಕಾಯಿ ತುರಿಗೆ,ಹುರಿದಿರುವ ಈರುಳ್ಳಿ,ಬೆಳ್ಳುಳ್ಳಿ,ಮಸಾಲೆಪುಡಿ,ಹುಣಸೇಹಣ್ಣು,ಬೇಳೆ ಹೂರಣ,ಕೊತ್ತುಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ,ಸಾಸಿವೆ,ಜೀರಿಗೆ,ಕರಿಬೇವು,ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು,ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ,ಎರಡನ್ನು ಚೆನ್ನಾಗಿ ಬೆರೆಸಿ,ಕುದಿಯಲು ಬಿಡಿ.ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ.ಒಂದು ಕುದಿ ಮಾತ್ರ ಕುದಿಸಿ ಇಳಿಸಿ.ಹೋಳಿಗೆ ಸಾರು ತಯಾರಾಗುತ್ತದೆ.
* ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು.
* ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ,ಕುದಿಸಿ,ಕುದಿಸಿ,ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ.

ಹೋಳಿಗೆ ತಯಾರಿಸುವ ವಿಧಾನದ ಲಿಂಕ್ :

http://indiankannadarecipes.blogspot.com/2007/06/holige-obbattu.html

Monday, July 25, 2011

Simple GoLiBaje - ಗೋಳಿ ಬಜೆ:

ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ.


ಗೋಳಿ ಬಜೆ:

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು - ಒಂದು ಬಟ್ಟಲು
ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು
ಸಕ್ಕರೆ ಪುಡಿ - ಅರ್ಧ ಚಮಚಸೋಡ- ಚಿಟಿಕೆ
ಉಪ್ಪು- ರುಚಿಗೆ ಬೇಕಾಗುವಷ್ಟು
ಎಣ್ಣೆ - ಕರಿಯಲು

ತಯಾರಿಸುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.


ಮೈದಾಗೆ ಸೋಡಾ ಪುಡಿ,ಉಪ್ಪು,ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ.ತುಂಬಾ ತೆಳ್ಳಗೆ ಇರಬಾರದು, ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಕೈನಲ್ಲಿ ತೆಗೆದುಕೊಂಡು ಬಿಡುವಂತಿರಬೇಕು.
ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಗುಂಡಗೆ ಎಣ್ಣೆಯಲ್ಲಿ  ಬಿಡಿ. ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು, ತೆಗೆಯಿರಿ, ಪೇಪರ್ ಟವಲ್ ಮೇಲೆ ಹಾಕಿ, ಸಾಸ್ ಅಥವ ಚಟ್ನಿ  ಜೊತೆ ಸರ್ವ್ ಮಾಡಿ.

Tuesday, July 19, 2011

Bisi Bele Bhath Powder- ಬಿಸಿಬೇಳೆ ಭಾತ್ ಪುಡಿ:

ಬಿಸಿಬೇಳೆ ಭಾತ್ ಪುಡಿ:

ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-೨
ಲವಂಗ-೪
ಚೆಕ್ಕೆ-ಒಂದಿಂಚಿನ ಚೂರು
ಮೆಣಸು - ಅರ್ಧ ಚಮಚ ಮತ್ತು
ಒಣಕೊಬ್ಬರಿ ಸ್ವಲ್ಪ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಕ್ರಮವಾಗಿ ಒಂದೊಂದು ಚಮಚ

ಪುಡಿ ತಯಾರಿಸುವ ಮುಂಚೆ ಗಮನಿಸಬೇಕಾದ ಅಂಶಗಳು:

ಕಡ್ಲೆಬೇಳೆ,ಉದ್ದಿನಬೇಳೆಯನ್ನು ಬೇಕೆನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಹಾಕಿದರೆ ಅದರ ಪರಿಮಳ ಮತ್ತು ರುಚಿ ಎರಡು ಚೆನ್ನಾಗಿರುತ್ತದೆ. ಬೇಡವೆಂದರೆ ಬೇಳೆಗಳನ್ನು ಹಾಕದೇ ಸಹ ಪುಡಿ ತಯಾರಿಸಬಹುದು. ಬೇಳೆಗಳನ್ನು ಹಾಕುವುದರಿಂದ ಭಾತ್ ನೀರು ಹೊಡೆದಂತೆ ಇರುವುದಿಲ್ಲ, ಬೇಳೆಗಳನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ನಿಮಗೆ ಹೇಗೆ ಬೇಕೋ ಹಾಗೆ ತಯಾರಿಸಿಕೊಳ್ಳಿ.

ಒಣಮೆಣಸಿನ ಕಾಯಿಗಳನ್ನು ಖಾರಕ್ಕೆ ಮತ್ತು ಬಣ್ಣಕ್ಕೆ ಸರಿಹೊಂದುವಂತಹ ಕಾಯಿಗಳನ್ನು ಬಳಸಿ, ಪುಡಿಯ ಬಣ್ಣ ಮತ್ತು ಖಾರ ಎರಡು ಸಹ ನೀವು ಬಳಸುವ ಮೆಣಸಿನಕಾಯಿಗಳನ್ನು ಅವಲಂಬಿಸಿರುತ್ತದೆ.

ಈ ಪ್ರಮಾಣವೂ ಒಂದು ಬಾರಿ ಬಿಸಿಬೇಳೆಭಾತ್ ತಯಾರಿಸುವುದಕ್ಕೆ ಮಾತ್ರ ಕೊಟ್ಟಿರುವುದು. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪುಡಿ ಬೇಕೆನಿಸಿದರೆ ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ.

ತಯಾರಿಸುವ ವಿಧಾನ:

* ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.

* ಕೊಬ್ಬರಿಯನ್ನು ಸ್ವಲ್ಪ ಹುರಿದುಕೊಳ್ಳಿ, ಯಾವ ಸಾಮಗ್ರಿಗಳನ್ನು ಸೀದಿಸಬಾರದು.

* ಒಂದೊಂದಾಗಿ ಬೇಕಾದರೂ ಹುರಿದುಕೊಳ್ಳಬಹುದು ಅಥವಾ ಗೊತ್ತಿರುವವರೂ ಹದಕ್ಕೆ ಸರಿಯಾಗಿ ಎಲ್ಲವನ್ನು ಒಂದೊಂದಾಗಿ ಸೇರಿಸುತ್ತಾ ಹುರಿದುಕೊಳ್ಳಬಹುದು.

* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಕ್ಷಣವೇ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.

* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.

* ಧನಿಯಾ/ಕೊತ್ತುಂಬರಿ ಬೀಜಗಳನ್ನು ಹಾಕಿ ಪ್ರೆಶ್ ಆಗಿ ಹುರಿದು ಪುಡಿ ಮಾಡಿದರೆ ಅದರ ಸುವಾಸನೆಯು ಪುಡಿಯಲ್ಲಿ ಸೇರಿಕೊಳ್ಳುತ್ತದೆ. ಇದೆಲ್ಲಾ ಹುರಿದು ರಂಪ ಮಾಡುವವರಾರು ಎಂದು ಧನಿಯ ಪುಡಿಯನ್ನು ಬಳಸಬಹುದು. ಆದರೆ ಪುಡಿ ಘಮ ಘಮ ಎನ್ನುವುದಿಲ್ಲ, ಅದರ ಪರಿಮಳವೂ ಅಷ್ಟಾಗಿ ಇರುವುದಿಲ್ಲ. ಯಾವಾಗಲಾದರೊಮ್ಮೆ ತುಂಬಾ ಅರ್ಜೆಂಟ್ ಇದ್ದಾಗ ರೆಡಿಮೆಡ್ ಪುಡಿಗಳನ್ನು (ಮೆಣಸಿನಕಾಯಿ ಮತ್ತು ಕೊತ್ತುಂಬರಿಯ ಪುಡಿ) ಬಳಸಿಕೊಳ್ಳಿ.

* ಪುಡಿಯನ್ನು ಸ್ಟೋರ್ ಮಾಡಿರುವ ಡಬ್ಬಿಗೆ ಒದ್ದೆಯ ಚಮಚವನ್ನು ಹಾಕಬೇಡಿ. ಪ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚು ಫ್ರೆಶ್ ಆಗಿರುತ್ತದೆ.

* ಬಿಡುವಿದ್ದಾಗ ಪುಡಿ ತಯಾರಿಸಿಟ್ಟುಕೊಂಡರೆ, ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ನೀರು ಹೆಚ್ಚಾಗಿ ಹಾಕಿ ಬೇಯಿಸಿ,ಪುಡಿ ಹಾಕಿ, ಉಪ್ಪು,ಹುಳಿ ಮತ್ತು ಸ್ವಲ್ಪ ಬೆಲ್ಲ ಹಾಗೂ ಒಗ್ಗರಣೆ ಹಾಕಿ,ಬೇಗ ಬಿಸಿಬೇಳೆಭಾತ್ ತಯಾರಿಸಬಹುದು.

Wednesday, April 20, 2011

Beans Palya - ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಹುರುಳಿಕಾಯಿ /ಬೀನ್ಸ್ ನಲ್ಲಿ ಬಲಿತಿರುವ ಕಾಯಿ ತೆಗೆದುಕೊಂಡರೆ ಅದರಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಮತ್ತು ಹಸಿರಾಗಿರುವ ಕಾಯಿಯನ್ನು ತೆಗೆದುಕೊಳ್ಳಿ. ಹುರುಳಿಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಲ್ಯ,ಸಾರು,ಸಾಗು ಯಾವುದಕ್ಕೆ ಬೇಕಾದರೂ ಇದನ್ನು ಬಳಸಬಹುದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇಲ್ಲಿ ಬರೆದಿರುವ ಸಿಂಪಲ್ ಪಲ್ಯದಲ್ಲಿಯೇ ತುಂಬಾ ರುಚಿ ಜಾಸ್ತಿಯಾಗಿರುತ್ತದೆ. ಈ ಪಲ್ಯ ಸೈಡ್ ಡಿಶ್ ಅಥವಾ ಚಪಾತಿ,ಪೂರಿ,ಪರೋಟ ಮತ್ತು ಬ್ರೆಡ್ ಜೊತೆ ಸಹ ಚೆನ್ನಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಪಲ್ಯ. ಎಲ್ಲರಿಗೂ ತಿಳಿದಿರುವಂತೆ ಹುರುಳಿಕಾಯಿ ಪಲ್ಯದ ಪಫ್ ನಲ್ಲಿ ಅಂತೂ ಹೆಚ್ಚಿನ ರುಚಿ ಇರುತ್ತದೆ. ಪಫ್ ತಯಾರಿಸುವಾಗ ಆಲೂಗೆಡ್ಡೆ ಪಲ್ಯದ ಬದಲು, ಈ ಪಲ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಬಳಸಬಹುದು.

ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ - ಅರ್ಧ ಕಿಲೋ
ಈರುಳ್ಳಿ - ಒಂದು, ಸಣ್ಣಗೆ ಹೆಚ್ಚಿ,
ಹಸಿಮೆಣಸಿನಕಾಯಿ -ರುಚಿಗೆ, ಉದ್ದಕ್ಕೆ ಸೀಳಿಕೊಂಡರೆ ಉತ್ತಮ
ಎಣ್ಣೆ - ಅವಶ್ಯಕತೆ ಇದ್ದಷ್ಟು
ಸಾಸಿವೆ ಸ್ವಲ್ಪ
ಕರಿಬೇವು- ಒಂದು ಗರಿ, ಆಗೇ ಕೈಯಲ್ಲಿ ಮುರಿದುಕೊಳ್ಳಿ.
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದು ಚಮಚ
ಅರಿಶಿನ ಚಿಟಿಕೆ
ಉಪ್ಪು ರುಚಿಗೆ
ಕಾಯಿತುರಿ ಸ್ವಲ್ಪ ಜಾಸ್ತಿ ಇರಲಿ
ಕೊತ್ತುಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.

ವಿಧಾನ:

ಮೊದಲು ಹುರುಳಿಕಾಯಿಯನ್ನು ಚೆನ್ನಾಗಿ ತೊಳೆದು, ನಾರು ತೆಗೆದು ಬಿಡಿಸಿಕೊಂಡು, ಕಾಯಿಯನ್ನು ಸಣ್ಣಗೆ ಒಂದೇ ಸಮನಾಗಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಬಾಡಿಸಿ, ಕರಿಬೇವು, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೆಚ್ಚಿದ ಹುರುಳಿಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಎಳೆಯದಾಗಿದ್ದರೆ ಬೇಗ ಬೇಯುವುದು, ಬಲಿತಿದ್ದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ. ಎರಡು ಬ್ರೆಡ್ ಗಳ ಮಧ್ಯೆಯೂ ಪಲ್ಯ ಇಟ್ಟು ತಿನ್ನಬಹುದು, ಪಫ್ ತರಹ ರುಚಿಯಾಗಿರುತ್ತದೆ.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.

Monday, March 21, 2011

Rasam Powder - ರಸಂ ಪುಡಿ / ರಸಂ ಪೌಡರ್

ರಸಂ ಪುಡಿ / ರಸಂ ಪೌಡರ್  

ಬೇಕಾಗುವ ಪದಾರ್ಥಗಳು:


ಒಣ ಮೆಣಸಿನ ಕಾಯಿ - ಒಂದು ಬಟ್ಟಲು
ಧನಿಯಾ ಬೀಜ - ಅರ್ಧ ಬಟ್ಟಲು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಒಂದು ದೊಡ್ಡ ಚಮಚ
ಮೆಂತ್ಯ - ದೊಡ್ಡ ಚಮಚದಲ್ಲಿ ಅರ್ಧ
ಕರಿಬೇವು - ಒಂದು ಬಟ್ಟಲು
ಅರಿಶಿಣ - ಒಂದು ಚಿಕ್ಕ ಚಮಚ
ಇಂಗು - ಒಂದು ಚಿಕ್ಕ ಚಮಚ
ಎಣ್ಣೆ - ಅರ್ಧ ಚಮಚ

ತಯಾರಿಸುವ ವಿಧಾನ:


ಬಾಣಲೆಗೆ ಮೆಣಸಿನಕಾಯಿ, ಧನಿಯಾ, ಜೀರಿಗೆ,ಮೆಂತ್ಯ,ಮೆಣಸು ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹುರಿಯಿರಿ, ಹೀಗೆ ಹುರಿದ ನಂತರ ಮೆಣಸಿನಕಾಯಿಯನ್ನು ಮುರಿದು ಪರೀಕ್ಷೆ ಮಾಡಿ, ಅದು ಗರಿಗರಿಯಾಗಿದ್ದು ಅದುಮಿದ ತಕ್ಷಣ ಮುರಿದುಕೊಂಡರೆ ಹುರಿದಿದ್ದು ಸಾಕು, ನಂತರ ಅದಕ್ಕೆ ಅರಿಶಿಣ/ಅರಿಶಿನ , ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಬೆರೆಸಿ. ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಡಿ.  ಬಾಣಲೆಯಲ್ಲಿರುವ ಸಾಮಗ್ರಿಗಳು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.ಘಮ ಘಮ ರಸಂ ಪುಡಿ ಸಿದ್ಧವಾಗುತ್ತದೆ.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.

# ಗಮನಿಸಬೇಕಾದ ಅಂಶಗಳು:

*  ಒಣ ಮೆಣಸಿನಕಾಯಿಯನ್ನು ಅರ್ಧಕ್ಕೆ ಮುರಿದು ಬಟ್ಟಲಿಗೆ ಹಾಕಿ, ಒಂದು ಪ್ರಮಾಣದಲ್ಲಿ ಮೆಣಸಿನಕಾಯಿ ತೆಗೆದುಕೊಂಡರೆ, ಅದರ ಅರ್ಧದಷ್ಟು ಪ್ರಮಾಣದಲ್ಲಿ ಧನಿಯಾ ಬೀಜಗಳನ್ನು ತೆಗೆದುಕೊಳ್ಳಿ.

*  2:1 ಪ್ರಮಾಣದಲ್ಲಿ ಮೆಣಸಿನಕಾಯಿ ಮತ್ತು ಧನಿಯಾ ತೆಗೆದುಕೊಳ್ಳಿ.

*  ಖಾರವು ಮೆಣಸಿನಕಾಯಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಒಂದೊಂದು ಮೆಣಸಿನಕಾಯಿ ಒಂದೊಂದು ರೀತಿಯ   ಕಾರವನ್ನು ಹೊಂದಿರುತ್ತದೆ. ಬಣ್ಣ ಸಹ. ಆಗಾಗಿ ನಿಮಗೆ ಸರಿ ಎನಿಸಿದ ಮೆಣಸಿನಕಾಯಿಗಳನ್ನು ಹಾಕಿ.

ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.

* ಕರಿಬೇವು ಸಹ ಇಲ್ಲಿ ಮುಖ್ಯವಾಗಿರುತ್ತದೆ.

*  ಪದಾರ್ಥಗಳನ್ನು ಹುರಿಯುವಾಗ ಸರಿಯಾದ ಹದದಲ್ಲಿ ಹುರಿಯಿರಿ, ಸೀದಿಸಬೇಡಿ. ತಣ್ಣಗಾದ ನಂತರವೇ ಮಿಕ್ಸಿಗೆ ಹಾಕಬೇಕು.


Popular Posts