Monday, February 16, 2009

Tomato Juice/Sharabat-ಟಮೋಟ ಶರಬತ್ತು:

ಟಮೋಟ ಶರಬತ್ತು:
ಸಾಮಾನುಗಳು:

ಚೆನ್ನಾಗಿ ಹಣ್ಣಾಗಿರುವ ಟಮೋಟ
ಸಕ್ಕರೆ
ಏಲಕ್ಕಿ ಪುಡಿ

ವಿಧಾನ:

ಟಮೋಟವನ್ನು ಚೆನ್ನಾಗಿ ತೊಳೆದು,ಮಿಕ್ಸಿಗೆ ಹಾಕಿ,ಅದರೊಂದಿಗೆ ಸಕ್ಕರೆ,ಏಲಕ್ಕಿಪುಡಿ ಮತ್ತು ನೀರನ್ನು ಹಾಕಿ ,ರುಬ್ಬಿಕೊಳ್ಳಿ(ಬ್ಲೆಂಡ್ ಮಾಡಿಕೊಳ್ಳಿ). ಇದನ್ನು ಸೋಸಿದರೆ ಟಮೋಟ ಶರಬತ್ತು ತಯಾರಾಗುತ್ತದೆ.ಟಮೋಟೋ ಹಣ್ಣಿನ ನೈಜ ಬಣ್ಣದ ಈ ಶರಬತ್ತು ನೋಡಲು ಕೂಡ ಚೆನ್ನಾಗಿರುತ್ತದೆ. ತಣ್ಣಗೆ ಬೇಕಾದವರು ತಣ್ಣನೆ ನೀರನ್ನು ಹಾಕಿಕೊಳ್ಳಿ ರುಬ್ಬಿಕೊಳ್ಳುವಾಗ. ಈ ಶರಬತ್ತನ್ನು ತಯಾರಿಸಿದ ತಕ್ಷಣ ಕುಡಿದರೆ ಒಳ್ಳೆಯದು,ರುಚಿಯಾಗಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಅದರ ರುಚಿ ಬದಲಾದಂತೆ ಎನಿಸುತ್ತದೆ.
* ಚಿಟಿಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಬೇಕಾದರೆ ಸೇರಿಸಿ ಕುಡಿಯಬಹುದು. ಈ ಶರಬತ್ತು ದಣಿವನ್ನು ನಿವಾರಿಸುತ್ತದೆ. ಆಯಾಸಕ್ಕೆ ಒಳ್ಳೆಯ ಮದ್ದು.

Saturday, February 14, 2009

Besan Laddu/Ladu-ಬೇಸನ್ಉಂಡೆ/ಕಡ್ಲೆಹಿಟ್ಟಿನ ಉಂಡೆ:

ಬೇಸನ್ ಉಂಡೆ/ಕಡ್ಲೆಹಿಟ್ಟಿನ ಉಂಡೆ:

ಸಾಮಗ್ರಿಗಳು;
ಕಡ್ಲೆಹಿಟ್ಟು - ಒಂದು ಬಟ್ಟಲು
ಚಿರೋಟಿ ರವೆ - ಅರ್ಧ ಬಟ್ಟಲು
ಹಾಲು - ಒಂದು ಕಪ್
ಸಕ್ಕರೆ - ಎರಡು ಬಟ್ಟಲು
ಏಲಕ್ಕಿ ಪುಡಿ ಸ್ವಲ್ಪ
ತೆಂಗಿನತುರಿ / ಕೊಬ್ಬರಿತುರಿ

ತಯಾರಿಸುವ ರೀತಿ:
ಕಡಲೆಹಿಟ್ಟು ಮತ್ತು ಚಿರೋಟಿ ರವೆಯನ್ನು ಬೇರೆ ಬೇರೆಯಾಗಿ ಘಂ ಎನ್ನುವ ವಾಸನೆ ಬರುವಂತೆ ಹುರಿಯಬೇಕು.
ಹಾಲಿಗೆ ಸಕ್ಕರೆ,ತೆಂಗಿನತುರಿ ಸೇರಿಸಿ,ಕಾಯಲು ಇಡಿ. ಹಾಲು ಕಾದು ಸಕ್ಕರೆ ಕರಗಿ ಸ್ವಲ್ಪ ಪಾಕ ಬಂದಾಗ ಹುರಿದಿಟ್ಟಿರುವ ಕಡ್ಲೆಹಿಟ್ಟನ್ನು ಮತ್ತು ರವೆಯನ್ನು ಹಾಕಿ, ಚೆನ್ನಾಗಿ ಗೊಟಾಯಿಸುತ್ತಿರಿ,ಏಲಕ್ಕಿ ಪುಡಿ ಸಹ ಸೇರಿಸಿ,ಹೀಗೆಯೇ ಎಲ್ಲಾ ಮಿಶ್ರಣವೂ ಚೆನ್ನಾಗಿ ಹೊಂದಿಕೊಂಡು ಸ್ವಲ್ಪ ಬೆಂದ ನಂತರ ಅದನ್ನು ಕೆಳಗಿಳಿಸಿ,ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ರೀತಿಯಲ್ಲಿ ಉಂಡೆ ಕಟ್ಟಿರಿ.

*ದ್ರಾಕ್ಷಿ , ಗೋಡಂಬಿ ಬೇಕಾದರೆ ಸೇರಿಸಬಹುದು.

Wednesday, February 11, 2009

Sabbassige Soppina Bhath - ಸಬ್ಬಸ್ಸಿಗೆ ಸೊಪ್ಪಿನ ಭಾತ್:

ಸಬ್ಬಸ್ಸಿಗೆ ಸೊಪ್ಪಿನ ಭಾತ್:

ಬೇಕಾಗುವ ಸಾಮನುಗಳು:

ಅಕ್ಕಿ - ಎರಡು ಕಪ್
ಸಬ್ಬಸ್ಸಿಗೆ ಸೊಪ್ಪು
ಬಟಾಣಿ,ಕ್ಯಾರೆಟ್,ಬೀನ್ಸ್ (ಪ್ರೆಶ್/ಫ಼್ರೋಜ಼ನ್)-ಅರ್ಧ ಬಟ್ಟಲು
ಹೆಚ್ಚಿದ ಈರುಳ್ಳಿ
ಒಂದೆರಡು ಹಸಿಮೆಣಸಿನಕಾಯಿ
ಟಮೋಟ ಹಣ್ಣು - ಒಂದು
ಅಚ್ಚಮೆಣಸಿನ ಪುಡಿ-ಅರ್ಧ ಚಮಚ
ಧನಿಯ ಪುಡಿ - ಒಂದುವರೆ ಚಮಚ
ಗರಂ ಮಸಾಲ-ಅರ್ಧ ಚಮಚ
ಸಾರಿನಪುಡಿ - ಅರ್ಧಚಮಚ
ಕೊಬ್ರಿತುರಿ/ ಕಾಯಿತುರಿ
ಚೆಕ್ಕೆ, ಲವಂಗ, ಪತ್ರೆ, ಏಲಕ್ಕಿ
ಎಣ್ಣೆ, ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಕೊತ್ತುಂಬರಿಸೊಪ್ಪು
ನಿಂಬೆರಸ
ಉಪ್ಪು

ತಯಾರಿಸುವ ರೀತಿ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿಡಿ.
ಸಬ್ಬಸ್ಸಿಗೆ ಸೊಪ್ಪನ್ನು ಶುಚಿಗೊಳಿಸಿ,ಚೆನ್ನಾಗಿ ತೊಳೆದುಕೊಂಡು,ಸಣ್ಣಗೆ ಹೆಚ್ಚಿಡಿ.
ಮೊದಲು ಎಣ್ಣೆಯನ್ನು ಕಾಯಿಸಿ,ಅದಕ್ಕೆ ಸಾಸಿವೆ,ಜೀರಿಗೆ,ಚೆಕ್ಕೆ,ಲವಂಗ,ಏಲಕ್ಕಿ,ಪತ್ರೆ,ಹಸಿಮೆಣಸಿನಕಾಯಿ,ಕರಿಬೇವು ಮತ್ತು ಈರುಳ್ಳಿಯನ್ನು ಕ್ರಮವಾಗಿ ಹಾಕಿ,ಒಂದೆರಡು ನಿಮಿಷ ಹುರಿಯಿರಿ. ಟಮೋಟ ಹಾಕಿ,ಅರಿಸಿನ,ಹೆಚ್ಚಿಟ್ಟ ಸೊಪ್ಪು,ಕ್ಯಾರೆಟ್,ಬೀನ್ಸ್ ಮತ್ತು ಬಟಾಣಿ ಹಾಕಿ ಐದಾರು ನಿಮಿಷ ಬಾಡಿಸಿ. ನಂತರ ಅಚ್ಚ ಮೆಣಸಿನಪುಡಿ,ಧನಿಯಾ ಪುಡಿ,ಸಾರಿನಪುಡಿ ಮತ್ತು ಗರಂ ಮಸಾಲಾ ಹಾಕಿ,ಚೆನ್ನಾಗಿ ಬೆರೆಸಿ,ಕೊತ್ತುಂಬರಿಸೊಪ್ಪು,ತೆಂಗಿನತುರಿ,ಉಪ್ಪು ಮತ್ತು ಅಕ್ಕಿಯನ್ನು ಹಾಕಿ,ಅಳತೆಗೆ ತಕ್ಕ ನೀರು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಬೆರೆಸಿ,ನಿಂಬೆರಸ ಸಹ ಸೇರಿಸಿ.ಮುಚ್ಚಳ ಮುಚ್ಚಿ. ಅಕ್ಕಿ ಮತ್ತು ಎಲ್ಲಾ ಮಿಶ್ರಣವು ಬೆಂದಿದೆ ಎನಿಸಿದ ತಕ್ಷಣ/ ಒಂದು ವಿಷ್ಹಲ್ ಕೂಗಿಸಿ. ಮುಚ್ಚಳ ತೆಗೆದ ಮೇಲೆ ಮತ್ತೆ ಎಲ್ಲಾ ಚೆನ್ನಾಗಿ ಬೆರೆಸಿ.

ಸಬ್ಬಸ್ಸಿಗೆ ಸೊಪ್ಪಿನ ಪರಿಮಳದ ಘಮ ಘಮಿಸುವ ಸಬ್ಬಸ್ಸಿಗೆ ಸೊಪ್ಪಿನಭಾತ್ ತಯಾರಾಗಿದೆ.
ಮೊಸರು ಪಚ್ಚಡಿ ಅಥವ ಯಾವುದಾದರೊಂದು ರಾಯತದೊಂದಿಗೆ ಬಡಿಸಿ. ಜೊತೆಯಲ್ಲಿ ನಿಂಬೆಹಣ್ಣು ಮತ್ತು ಸೌತೆಕಾಯಿ ಸಲಾಡ್ ನೀಡಿ.
ತರಕಾರಿ ಬೇಡವೆಂದರೆ ಸಬ್ಬಸ್ಸಿಗೆಸೊಪ್ಪು ಮಾತ್ರ ಹಾಕಿ ತಯಾರಿಸಬಹುದು.

Sibehanninaraita - Guava Raita

ಸೀಬೆ/ಪೇರಲ/ಚ್ಯಾಪೆ ಹಣ್ಣಿನ ರಾಯತ:

ಪದಾರ್ಥಗಳು:
ಮೊಸರು ಒಂದು ಬಟ್ಟಲು
ಸೀಬೆಹಣ್ಣು
ಹೆಚ್ಚಿದ ಕೊತ್ತುಂಬರಿಸೊಪ್ಪು
ಕಾಳು ಮೆಣಸಿನಪುಡಿ
ಉಪ್ಪು

ರೀತಿ:
ಸೀಬೆಹಣ್ಣನ್ನು ಸಣ್ಣಗೆ ಹೆಚ್ಚಿಕೊಂಡು, ಮೊಸರಿನೊಂದಿಗೆ ಬೆರೆಸಿ ಅದಕ್ಕೆ ಉಪ್ಪು ಮತ್ತು ಮೆಣಸಿನಪುಡಿ ಹಾಕಿ ಬೆರೆಸಿ.ಕೊತ್ತುಂಬರಿಸೊಪ್ಪು ಉದುರಿಸಿ. ಸೀಬೆಹಣ್ಣಿನ ರಾಯತ ತಯಾರಾಗುತ್ತದೆ.

Tuesday, February 10, 2009

Bread Uppittu-ಬ್ರೆಡ್ ಉಪ್ಪಿಟ್ಟು:

ಬ್ರೆಡ್ ಉಪ್ಪಿಟ್ಟು:

ಸಾಮಗ್ರಿಗಳು:
ಬ್ರೆಡ್
ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು
ಉದ್ದಿನಬೇಳೆ, ಕಡ್ಲೆಬೇಳೆ
ಟಮೋಟ ಹಣ್ಣು
ಉಪ್ಪು ರುಚಿಗೆ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:
ಬ್ರೆಡ್ ಅನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಪಾತ್ರೆಗೆ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು ಹಾಕಿ,ನಂತರ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ, ಮೂರ್ನಾಲ್ಕು ನಿಮಿಷ ಬಾಡಿಸಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಹೆಚ್ಚಿದ ಟಮೋಟ ಹಾಕಿ, ಒಂದೆರಡು ನಿಮಿಷ ಹುರಿದು,ಉಪ್ಪು,ನಿಂಬೆರಸ, ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ,ಜೊತೆಯಲ್ಲಿಯೇ ಬ್ರೆಡ್ ಚೂರುಗಳನ್ನು ಹಾಕಿ,ಎಲ್ಲಾ ಒಗ್ಗರಣೆ ಬೆರೆಯುವಂತೆ ಸರಿಯಾಗಿ ಬೆರೆಸಿ. ಕಾಯಿತುರಿ ಸಹ ಬೆರೆಸಿ. ಇಳಿಸಿ.ಇದು ಬ್ರೆಡ್ ಇದ್ದ ತಕ್ಷಣ ತಯಾರಿಸಬಹುದು. ಬೇಗ ಆಗುತ್ತದೆ ಮತ್ತು ಸರಳವಾಗಿಯೂ ಇದೆ. ಬ್ರೆಡ್ ಉಪ್ಪಿಟ್ಟು ತಯಾರಿಸದ ತಕ್ಷಣ ತಿನ್ನಬೇಕು. ಇಲ್ಲ ಅಂದರೆ ಒಂಥರ ಮೆತ್ತಗೆ ಆಗುತ್ತದೆ ಬೇಗ. ಆಗ ತಿನ್ನಲು ರುಚಿ ಅಷ್ಟಾಗಿ ಚೆನ್ನಾಗಿರುವುದಿಲ್ಲ.

Tuesday, February 3, 2009

Almond/Badam Burfi-ಬಾದಾಮಿ ಬರ್ಫಿ:

ಬಾದಾಮಿ ಬರ್ಫಿ:

ಬೇಕಾಗುವ ಸಾಮಗ್ರಿಗಳು:

ಬಾದಾಮಿ- ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ತುಪ್ಪ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:

ಬಾದಾಮಿಯನ್ನು ಒಂದು ಗಂಟೆ ನೆನೆಸಿ, ಅದರ ಸಿಪ್ಪೆ ತೆಗೆದು, ನೀರು ಹಾಕದೆ ನುಣ್ಣಗೆ ಪೇಸ್ಟ್ ತರಹ ಮಾಡಿಕೊಂಡು,ಅದನ್ನು ಒಂದು ಪಾತ್ರೆಗೆ ಹಾಕಿ,ಸ್ವಲ್ಪ ಉರಿಯಲ್ಲಿ ಇಟ್ಟು ಹಸಿವಾಸನೆ ಹೋಗುವವರೆಗೂ ಕೈಆಡಿಸುತ್ತಿರಿ,ಅದರ ಬಣ್ಣ ಸ್ವಲ್ಪ ಬದಲಾದ ಮೇಲೆ ಅದಕ್ಕೆ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಿ,ಮಧ್ಯೆ ಬಿಟ್ಟು ಬಿಟ್ಟು ಕೆದಕುತ್ತಿರಿ,ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ತುಪ್ಪ ಒಂದು ಕಡೆ ಬೇರೆಯಾಗುತ್ತಾ ಬರುವಾಗ,ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ,ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಡೈಮೆಂಡ್ ಆಕಾರ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಬಾದಾಮಿ ಬರ್ಫಿ ತಯಾರಾಗುತ್ತದೆ. ಮಕ್ಕಳಿಗೆ ಪ್ರಿಯವಾದ ಬಾದಾಮಿ ಬರ್ಫಿಗಳು ತಯಾರು.

Monday, February 2, 2009

Palak Soppina Palya /Palak sabji



ಪಾಲಕ್ ಸೊಪ್ಪಿನ ಪಲ್ಯ :
ಬೇಕಾಗುವ ಸಾಮಗ್ರಿಗಳು:

ಪಾಲಕ ಸೊಪ್ಪು ಒಂದು ಅಥವಾ ಎರಡು ಕಟ್ಟು,
ಈರುಳ್ಳಿ ಒಂದು, ಹೆಚ್ಚಿಕೊಳ್ಳಿ
ಚಿಕ್ಕ ಆಲೂಗಡ್ಡೆ ಒಂದು ಸಣ್ಣದಾಗಿ ಹೆಚ್ಚಿಕೊಳ್ಳಿ,
ಟಮೋಟ ಒಂದು ಹೆಚ್ಚಿಕೊಳ್ಳಿ,
ಹಸಿಮೆಣಸಿನಕಾಯಿ ಒಂದು ಮದ್ಯಕ್ಕೆ ಸೀಳಿದ್ದು,
ರುಚಿಗೆ ತಕ್ಕಷ್ಟು ಸಾರಿನ ಪುಡಿ ಅಥವಾ ರಸಂ ಪುಡಿ,
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಎರಡು ಚಮಚ
ಜೀರಿಗೆ,ಸಾಸಿವೆ

ಮಾಡುವ ವಿಧಾನ :

ಪಾಲಕ್ ಚೆನ್ನಾಗಿ ಶುಚಿಗೊಳಿಸಿ,ತೊಳೆದು ನಂತರ ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಂಡು ನಂತರ ಅದಕ್ಕೆ ಆಲೂಗಡ್ಡೆ ಹಾಕಿ ಎರಡು,ಮೂರು ನಿಮಿಷ ಹಾಗೆ ಹುರಿದು , ಟಮೋಟ ಹಾಕಿ. ಆಮೇಲೆ ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಅದರಲ್ಲಿಯೇ ಬೆರೆಸಿ, ಉಪ್ಪು ,ಹಸಿಮೆಣಸಿನಕಾಯಿ ಮತ್ತು ಸಾರಿನ ಪುಡಿಹಾಕಿ ಮುಚ್ಚಿಡಿ, ನೀರು ಹಾಕುವ ಅವಶ್ಯಕತೆ ಇಲ್ಲ, ಅದು ಮುಚ್ಚಿದಾಗ ಆವಿಯಲ್ಲಿಯೇ ಬೇಯುತ್ತದೆ. ಮದ್ಯೆ ಒಮ್ಮೆ ತಿರುವಿ.ಐದು ನಿಮಿಷದಲ್ಲಿ ಬೇಯುವುದು. ನಂತರ ಕೊತ್ತಂಬರಿ ಸೊಪ್ಪು ಮತ್ತು ಕಾಯಿತುರಿ ಬೇಕಾದರೆ ಹಾಕಿಕೊಳ್ಳಿ. ಇದು ಊಟಕ್ಕೆ ಅಥವಾ ಚಪಾತಿಗೆ ನೆಂಚಿಕೊಳ್ಳಬಹುದು.

Sunday, February 1, 2009

Dil leaves Pakoda-ಸಬ್ಬಸ್ಸಿಗೆ ಸೊಪ್ಪಿನ ಪಕೋಡ:



ಸಬ್ಬಸ್ಸಿಗೆ ಸೊಪ್ಪಿನ ಪಕೋಡ:

ಬೇಕಾಗುವ ಸಾಮಗ್ರಿಗಳು:

ಕಡ್ಲೆಹಿಟ್ಟು - ಒಂದು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ -ಪೇಸ್ಟ್/ಹೆಚ್ಚಿದ್ದು
ಸಬ್ಬಸ್ಸಿಗೆ ಸೊಪ್ಪು -ಸ್ವಲ್ಪ/ನಿಮಗೆ ಬೇಕಾದಂತೆ
ಚಿಟಿಕೆ ಸೋಡ
ಕಾಯಿಸಿದ ಎಣ್ಣೆ - ಒಂದು ಚಮಚ
ಕಾರದ ಪುಡಿ
ಉಪ್ಪು
ಕೊತ್ತುಂಬರಿಸೊಪ್ಪು
ಎಣ್ಣೆ-ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ:

ಸಬ್ಬಸ್ಸಿಗೆ ಸೊಪ್ಪನ್ನು ಶುಚಿಗೊಳಿಸಿ, ಚೆನ್ನಾಗಿ ತೊಳೆದು,ಸಣ್ಣಗೆ ಹೆಚ್ಚಿ. ನಂತರ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಗಂಟಿಲ್ಲದಂತೆ ಕಲೆಸಿ. ತುಂಬಾ ತೆಳುವಾಗಿರಬಾರದು. ಈ ಪಕೋಡಕ್ಕೆ ಸ್ವಲ್ಪ ಗಟ್ಟಿಯಾಗಿ ಕಲೆಸಿ ಕೈನಲ್ಲಿ ಸ್ವಲ್ಪ ತೆಗೆದುಕೊಂಡು ಅದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಹಾಗೇ ನೇರವಾಗಿ ಕಾದಿರುವ ಎಣ್ಣೆಗೆ ಒಂದೊಂದಾಗಿ ಬಿಡಿ. ಉಂಡೆ ಅಂದರೆ ಉಂಡೆ ರೀತಿ ಗುಂಡಾಗಿ ಮಾಡಿ ಹಾಕಬೇಡಿ,ಆಗೇ ತೆಗೆದು ಎಣ್ಣೆಗೆ ಹಾಕಬೇಕು.ಅಥವಾ ಒಂದು ಚಮಚದಿಂದ ಸಹ ತೆಗೆದುಕೊಂಡು ಪುಟ್ಟ ಪುಟ್ಟದಾಗಿ ನೇರವಾಗಿ ಎಣ್ಣೆಗೆ ಹಾಕಿ,ಅವುಗಳನ್ನು ಹದವಾದ ಉರಿಯಲ್ಲಿ ಚೆನ್ನಾಗಿ ಬೇಯಿಸಿ,ತೆಗೆಯಿರಿ.ಸಬ್ಬಸ್ಸಿಗೆ ಸೊಪ್ಪಿನಪಕೋಡ ರೆಡಿಯಾಗುತ್ತದೆ.ಇದರ ಪರಿಮಳ ತುಂಬಾ ಚೆನ್ನಾಗಿರುತ್ತದೆ ರುಚಿ ಕೂಡ. ಬಿಸಿಕಾಫಿಯೊಂದಿಗೆ ಸವಿಯಿರಿ.


* ಸೊಪ್ಪು ಜಾಸ್ತಿ ಹಾಕಿದರೂ ಚೆನ್ನಾಗಿರುತ್ತದೆ.
* ಈ ರೀತಿ ಪಕೋಡಗಳು ಕರಿದ ಮೇಲೆ ಬಿಸಿ-ಬಿಸಿಯಾಗಿ ಸವಿದರೆ ರುಚಿ ಹೆಚ್ಚು. ಸಬ್ಬಸ್ಸಿಗೆ ಪಕೋಡ ತಣ್ಣಗಾದ ಮೇಲೆ ಸಹ ರುಚಿಯಾಗಿರುತ್ತದೆ.
* ಸೊಪ್ಪು ತಿನ್ನದ ಮಕ್ಕಳಿಗೆ ಈ ರೀತಿ ಪಕೋಡ ತಯಾರಿಸಿಕೊಟ್ಟರೆ, ಇಷ್ಟಪಟ್ಟು ತಿನ್ನುತ್ತಾರೆ.

Popular Posts