Cooking Tips / Kitchen Tips

ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು:



* ಅಡಿಗೆ ತಯಾರಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಧ್ಯದಲ್ಲಿ ಫೋನ್ ಅಥವ ಬಾಗಿಲುಗಳನ್ನು ಮುಟ್ಟಿ ಬಂದಿದ್ದರೆ, ಕೈಗಳನ್ನು ತೊಳೆದುಕೊಂಡು ಅಡಿಗೆ ಮುಂದುವರಿಸಿ, ಇಲ್ಲವೆಂದರೆ ಫುಡ್ ಪಾಯಿಸನ್ ಆಗುತ್ತದೆ.

* ತರಕಾರಿಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿ, ಉಪಯೋಗಿಸಿ.

* ಹಣ್ಣುಗಳನ್ನು ಕೂಡ ತೊಳೆದು ತಿನ್ನಿ.

* ಸೊಪ್ಪುಗಳನ್ನು ಐದರಿಂದ ಆರುಬಾರಿಯಾದರೂ ತೊಳೆಯಿರಿ,ನೀರಿನಲ್ಲಿ ನೆನಸುವಾಗ ಅದಕ್ಕೆ ಸ್ವಲ್ಪ ವಿನಿಗರ್ ಮತ್ತು ಉಪ್ಪನ್ನು ಹಾಕಿ ತೊಳೆಯುವುದರಿಂದ ಅದರಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ ಮತ್ತು ತಾಜಾ ಸಹ ಆಗುತ್ತದೆ.

* ಕಾಳು - ದಿನಸಿಗಳಿಗೆ ಹುಳ ಹಿಡಿಯದಂತೆ ಡಬ್ಬಕ್ಕೆ ಲವಂಗ ಹಾಕಿಡಿ. ಕೆಲವನ್ನು ರೆಫ್ರಿಜರೇಟರ್ ನಲ್ಲಿ ಇಡಿ.

* ಸಕ್ಕರೆಗೆ ಇರುವೆ ಬಂದರೆ ಲವಂಗ ಹಾಕಿಡಿ.

* ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ / ಲವಂಗ / ಒಣ ಮೆಣಸಿನಕಾಯಿ / ಈರುಳ್ಳಿ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ. ಅಕ್ಕಿ ಡಬ್ಬಕ್ಕೆ ಮೇಲ್ಭಾಗ ಮತ್ತು ಮುಚ್ಚಳಕ್ಕೆ ಎಣ್ಣೆ ಹಚ್ಚಿ ಇಟ್ಟರೆ ಅದರಲ್ಲಿ ಹುಳ ಇದ್ದರೆ ಅದು ಮೇಲೆ ಬರದಂತೆ ಹುಳುಗಳು ಅಲ್ಲೆ ಇರುತ್ತವೆ. ಇಲ್ಲವೆಂದರೆ ಎಲ್ಲಾ ಕಡೆಯೂ ಹುಳ ಹರಡಿಕೊಳ್ಳುತ್ತವೆ.

* ಅನ್ನ ಮಾಡುವಾಗ ನಿಂಬೆರಸ ಮತ್ತು ಎಣ್ಣೆ ಹಾಕಿದರೆ ಅನ್ನ ಉದುರು-ಉದುರಾಗುತ್ತದೆ.

* ಸಾರಿಗೆ ಉಪ್ಪು ಜಾಸ್ತಿ ಆದರೆ ಅದಕ್ಕೆ ಆಲೂಗೆಡ್ಡೆ ಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿ ಎರಡು ನಿಮಿಷ ಕುದಿಸಿ,ತೆಗೆಯಿರಿ.ಆಲೂಗೆಡ್ಡೆಯೂ ಉಪ್ಪನ್ನು ಹೀರಿಕೊಂಡಿರುತ್ತದೆ. ಅಥವಾ ಅನ್ನದ ಸಣ್ಣ ಉಂಡೆಯನ್ನು ಮಾಡಿಕೊಂಡು ಅದನ್ನು ಸಾರಿಗೆ ತೇಲಿಬಿಟ್ಟು ಸ್ವಲ್ಪ ಹೊತ್ತಾದ ಮೇಲೆ ಅನ್ನ ಬಿಟ್ಟುಕೊಳ್ಳದಂತೆ ಉಂಡೆ ತೆಗೆದು ಹಾಕಿ, ಅದು ಉಪ್ಪನ್ನು ಹೀರಿಕೊಂಡಿರುತ್ತದೆ. ಇಲ್ಲವೆಂದರೆ ಸಾರಿಗೆ ನಿಂಬೆರಸ ಮತ್ತು ಸ್ವಲ್ಪ ನೀರು ಸೇರಿಸಿ, ನಿಂಬೆರಸದಿಂದ ರುಚಿಯೂ ಹೆಚ್ಚುತ್ತದೆ.

* ಮೊಟ್ಟೆಯನ್ನು ಬೇಯಿಸುವಾಗ ಆ ನೀರಿಗೆ ಸ್ವಲ್ಪ ವಿನಿಗರ್ ಮತ್ತು ಉಪ್ಪು ಹಾಕಿ ಬೇಯಿಸಿದರೆ,ಮೊಟ್ಟೆಗಳು ಹೊಡೆದು ಕೊಳ್ಳದೆ ಚೆನ್ನಾಗಿ ಬೇಯುತ್ತವೆ ಹಾಗೂ ರುಚಿಯೂ ಚೆನ್ನಾಗಿರುತ್ತದೆ.

* ಮೊಟ್ಟೆಯ ಆಮ್ಲೆಟ್ ತಯಾರಿಸುವಾಗ,ಅದಕ್ಕೆ ಒಂದೆರಡು ಚಮಚ ಹಾಲು ಸೇರಿಸಿ,ಬೀಟ್ ಮಾಡಿದರೆ ಆಮ್ಲೆಟ್ ರುಚಿ ಮತ್ತು ಸ್ಪಾಂಜಿ ತರಹ ಬರುತ್ತದೆ.

* ಆಮ್ಲೆಟ್ ಗೆ ಈರುಳ್ಳಿ ಜೊತೆ ಟಮೋಟ ಕೂಡ ಹಾಕಿ ತಯಾರಿಸಿ,ರುಚಿ ಹೆಚ್ಚುತ್ತದೆ.

* ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಅನ್ನು ಮೊದಲೆ ತಯಾರಿಸಿ ಇಟ್ಟುಕೊಂಡಿದ್ದರೆ,ಅಡಿಗೆ ತಯಾರಿಸುವಾಗ ಸುಲಭವಾಗಿ ಬಳಸಬಹುದು.

* ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಅದಕ್ಕೆ ಸ್ವಲ್ಪ ಉಪ್ಪು,ವಿನಿಗರ್ ಮತ್ತು ಸಿಟ್ರಿಕ್ ಆಸಿಡ್ ಹಾಕಿ ರುಬ್ಬಿ ಇಟ್ಟುಕೊಳ್ಳಿ, ಫ್ರೆಶ್ ಆಗಿರುತ್ತದೆ.

* ಬೆಂಡೆಕಾಯಿಯ ತುಂಡುಗಳನ್ನು ಬಾಣಲೆಯಲ್ಲಿ ಹುರಿಯುವಾಗ ಅದಕ್ಕೆ ಒಂದೆರಡು ಚಮಚ ವಿನಿಗರ್ ಅಥವಾ ನಿಂಬೆರಸ ಸೇರಿಸಿ ಹುರಿಯಿರಿ, ಬೇಗ ಲೋಳೆ ಬಿಡುತ್ತದೆ. ಕಾಯಿಗಳು ಚೆನ್ನಾಗಿ ಹುರಿದು ಕೊಳ್ಳುತ್ತವೆ.

* ಸೊಪ್ಪು ಅಥವಾ ತರಕಾರಿಗಳನ್ನು ಸ್ಟೋರ್ ಮಾಡುವಾಗ ಅದಕ್ಕೆ ಪೇಪರ್ ಹಾಕಿ ಕವರ್ ನಲ್ಲಿ ಇಡುವುದರಿಂದ, ನೀರನ್ನು ಹೀರಿಕೊಳ್ಳುತ್ತದೆ. ಬೇಗ ಹಾಳಾಗುವುದಿಲ್ಲ.

* ತರಕಾರಿಗಳನ್ನು ತುಂಬಾ ಬೇಯಿಸದಿರಿ, ಹೆಚ್ಚಾಗಿ ಬೇಯಿಸಿದರೆ ಅದರಲ್ಲಿರುವ ಪೌಷ್ಠಿಕಾಂಶಗಳು ಹಾಳಾಗುತ್ತವೆ.

* ಸೊಪ್ಪುಗಳ ಪಲ್ಯ ಮಾಡುವಾಗಲು ಅಷ್ಟೇ ಅದಕ್ಕೆ ಹೆಚ್ಚು ನೀರು ಸೇರಿಸದೆ, ಅದರಲ್ಲಿಯೇ ಇರುವ ನೀರಿನಲ್ಲಿ , ಮುಚ್ಚಳ ಮುಚ್ಚಿ ಬೇಯಿಸಿ, ಸ್ವಲ್ಪ ಉಪ್ಪು ಬೆರೆಸಿ, ಅದರಲ್ಲಿಯೇ ಸೊಪ್ಪು ಬೇಯುತ್ತದೆ. ತುಂಬಾ ಬೇಯಿಸಬೇಡಿ. ಸೊಪ್ಪನ್ನು ಹೆಚ್ಚಿಟ್ಟು ತೊಳೆಯದಿರಿ, ಮೊದಲೆ ಚೆನ್ನಾಗಿ ಶುಚಿಗೊಳಿಸಿ,ಉಪ್ಪು ಮತ್ತು ವಿನಿಗರ್ ಹಾಕಿ ನೆನೆಸಿ,ಸುಮಾರು ಸಾರಿ ತೊಳೆದು,ಆಮೇಲೆ ಹೆಚ್ಚಿ.

* ಮಸಾಲೆ ಸಾರುಗಳನ್ನು ಮಾಡುವಾಗ ಈರುಳ್ಳಿ,ಚೆಕ್ಕೆ,ಲವಂಗ,ಮೊಗ್ಗು,ಮೆಣಸು,ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಚಮಚ ಎಣ್ಣೆಯೊಂದಿಗೆ ಹುರಿದು ಮಸಾಲೆಯನ್ನು ತಯಾರಿಸಿ.

* ಮಸಾಲೆ ಜಾಸ್ತಿ ರುಬ್ಬಿಕೊಂಡು ಅದರಲ್ಲಿ ಎಷ್ಟು ಬೇಕೋ ಅಷ್ಟನ್ನು ತೆಗೆದು ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ಸಾಗು / ಮಸಾಲೆ ಗಳಿಗೆ ಉಪಯೋಗಿಸಬಹುದು.

* ಬದನೆಕಾಯಿ ಮತ್ತು ಬಾಳೆಕಾಯಿಗಳನ್ನು ಹೆಚ್ಚಿದ ನಂತರ ಅಂಟು ಅಂಟಾಗುತ್ತವೆ, ಹಾಗೂ ಕಪ್ಪಾಗುತ್ತವೆ, ಅದಕ್ಕೆ ಅದನ್ನು ನೀರಿನಲ್ಲಿ ಹಾಕಿಡಿ. ನೀರಿನ ಜೊತೆ ರಾಗಿಹಿಟ್ಟು / ಅರಿಶಿಣ / ವಿನಿಗರ್ / ನಿಂಬೆರಸ ಹಾಕಿ ಅದರಲ್ಲಿ ಹಾಕಿದರೆ ಇನ್ನೂ ಒಳ್ಳೆಯದು.

* ಅಡಿಗೆ ತಯಾರಿಸುವಾಗ ಸೌಟ್ ಗಳನ್ನು ಉದ್ದ ಹ್ಯಾಂಡಲ್ ಇರುವಂತವುಗಳನ್ನೆ ಉಪಯೋಗಿಸಿ,ಆಗ ಕೈಗಳಿಗೆ ತೊಂದರೆಯಾಗುವುದಿಲ್ಲ.

* ತುಪ್ಪ ಹಾಕುವ ಡಬ್ಬಿಗೆ ತಳದಲ್ಲಿ ಒಂದು ಚೂರು ಬೆಲ್ಲದ ತುಂಡು ಹಾಕಿ ಅದರ ಮೇಲೆ ತುಪ್ಪ ಹಾಕಿ ಇಟ್ಟರೆ ತುಪ್ಪ ಗುನುಗು ಬರದೆ ಫ್ರೆಶ್ ಆಗಿರುತ್ತದೆ.

* ಒಗ್ಗರಣೆಗೆ ಕರಿಬೇವು ಬಳಸುವಾಗ ಅದನ್ನು ಕೈನಲ್ಲಿ ತುಂಡುಮಾಡಿ ಹಾಕಿದರೆ,ಪರಿಮಳ ಹೆಚ್ಚುತ್ತದೆ.

* ಚಪಾತಿ ಹಿಟ್ಟು ಕಲೆಸುವಾಗ ಅದಕ್ಕೆ ಸ್ವಲ್ಪ ಹಾಲು ಮತ್ತು ವೆಜೆಟಬಲ್ ತುಪ್ಪ ಹಾಕಿ ಕಲೆಸಿದರೆ ಚಪಾತಿ ರುಚಿ ಮತ್ತು ಮೃದುವಾಗಿರುತ್ತವೆ.

* ರೊಟ್ಟಿ ಹಿಟ್ಟು ಕಲೆಸುವಾಗ ತಣ್ಣೀರಿನ ಬದಲು ಬಿಸಿ ನೀರು ಹಾಕಿ ಕಲೆಸಿದರೆ, ಚೆನ್ನಾಗಿ ಬರುತ್ತವೆ.

* ಹೋಳಿಗೆಗೆ ಕಣಕ ಹಿಟ್ಟು ಕಲೆಸುವಾಗ,ಅದಕ್ಕೆ ಸ್ವಲ್ಪ ಹಾಲು,ಚಿಟಿಕೆ ಅರಿಶಿಣ,ಚಿಟಿಕೆ ಉಪ್ಪು,ಸ್ವಲ್ಪ ಸಕ್ಕರೆ ಮತ್ತು ಒಂದೆರಡು ಚಮಚ ಅಕ್ಕಿಹಿಟ್ಟು ಮತ್ತು ಚಿರೋಟಿರವೆ ಹಾಕಿ ಎಲ್ಲಾ ಚೆನ್ನಾಗಿ ಬೆರೆಸಿ,ಕಲೆಸಿದರೆ,ಹೋಳಿಗೆಗಳು ಚೆನ್ನಾಗಿ ಬರುತ್ತದೆ ಹಾಗೂ ಬದಿಗಳು(ಎಡ್ಜ್) ಗಟ್ಟಿಯಾಗುವುದಿಲ್ಲ.

* ಮಸಾಲೆ ಅಥವಾ ಖಾರ ರುಬ್ಬುವಾಗಲೆ ಟಮೋಟೋ ಹಣ್ಣನ್ನು ಕೂಡ ಹಾಕಿ ರುಬ್ಬಿ ಇದರಿಂದ ರುಚಿ ಮತ್ತು ಬಣ್ಣ ಬರುತ್ತದೆ.

* ಚಟ್ನಿ ತಯಾರಿಸಿದಾಗ ತುಂಬಾ ಕಾರವಾದರೆ ನಿಂಬೆರಸ ಹಾಕಿ,ಬೆರೆಸಿ. ಚಟ್ನಿ ರುಚಿಯೊಂದಿಗೆ,ಕಾರ ಸಹ ಕಮ್ಮಿಯಾಗುತ್ತದೆ. ಕಾರ ಕಮ್ಮಿ ಆಗಲಿ ಅಂತನೆ ಅಲ್ಲದೆ ಯಾವ ಚಟ್ನಿ ತಯಾರಿಸಿದಾಗಲೂ ನಿಂಬೆರಸ ಹಾಕಿ ತುಂಬಾ ಟೇಸ್ಟ್ ಇರುತ್ತದೆ ಚಟ್ನಿ.



-- ಅಡಿಗೆಗಾಗಿ ಸುಮಾರು ಟಿಪ್ಸ್ ಇದೆ, ಒಂದೊಂದಾಗಿ ತಿಳಿಯೋಣ.

Popular Posts