Wednesday, September 17, 2008

Pepper Rasam/ಕಾಳುಮೆಣಸಿನ ರಸಂ:

ಕಾಳುಮೆಣಸಿನ ರಸಂ:

ಸಾಮಗ್ರಿಗಳು:
ಜೀರಿಗೆ
ಕಾಳು ಮೆಣಸಿನಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಉಪ್ಪು
ಕೊತ್ತುಂಬರಿಸೊಪ್ಪು

ವಿಧಾನ:
ಕಾಳುಮೆಣಸಿನಕಾಳು ಮತ್ತು ಜೀರಿಗೆಯನ್ನು ಸ್ವಲ್ಪ ವಾಸನೆ ಬರುವವರೆಗೂ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಹೆಚ್ಚಿಗೆ ನೀರು ಹಾಕಿ, ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಕುದಿಸಿ,ನಂತರ ಬೆಲ್ಲ ಮತ್ತು ಉಪ್ಪು ಹಾಕಿ,ಒಗ್ಗರಣೆ ಬೆರೆಸಿ.ಹುರಿದು ಪುಡಿ ಮಾಡಿಕೊಂಡಿರುವುದನ್ನು ಹಾಕಿ, ಚೆನ್ನಾಗಿ ಕದಡಿ. ಕೊತ್ತುಂಬರಿಸೊಪ್ಪನ್ನು ಹಾಕಿ ಬೆರೆಸಿ.

Tuesday, September 16, 2008

ಹಾಲಿನ ಪೇಡ/ Dhood Peda/Milk peda


ಹಾಲಿನ ಪೇಡ:

ಸಾಮಗ್ರಿಗಳು:
ಹಾಲಿನಪುಡಿ - ಎರಡು ಬಟ್ಟಲು
ಕಂಡೆನ್ಸ್ದ್ ಹಾಲಿನ ಟಿನ್ - ಒಂದು
ಬೆಣ್ಣೆ - ಅರ್ಧ ಬಟ್ಟಲು
ಏಲಕ್ಕಿ ಪುಡಿ

ವಿಧಾನ:
ಮೊದಲು ಬೆಣ್ಣೆಯನ್ನು ಕರಗಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ,ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ.ಗಂಟು ಆಗದಂತೆ ಕೈಯಾಡಿಸಿ,ಮಧ್ಯೆ ಮಧ್ಯೆ ತಿರುಗಿಸುತ್ತಿರಿ,ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ .ತಳ ಬಿಟ್ಟು ಬರುತ್ತಿದೆ ಎನಿಸಿದಾಗ ಕೆಳಗಿಳಿಸಿ.
ನಿಮಗೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿ. ಇದು ತಯಾರಿಸಲು ತುಂಬಾ ಸುಲಭ,ಬೇಗ ಆಗುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತು ಬಲು ಇಷ್ಟವಾಗುತ್ತದೆ.

Monday, September 15, 2008

ಹೆಸರುಬೇಳೆ ಕೋಸುಂಬರಿ / Moongdal Salad

ಯಾವುದೇ ಹಬ್ಬಗಳಿರಲಿ, ಸಂಭ್ರಮಗಳಿರಲಿ ಆ ಊಟದ ಎಲೆಯಲ್ಲಿ ಕೋಸುಂಬರಿ ಇರಲೇಬೇಕು. ಊಟ ಬಡಿಸುವಾಗ ಅದರದ್ದೇ ಆದ ಪ್ರಾಮುಖ್ಯತೆ ಕೋಸುಂಬರಿಗೆ ಇದೆ. ಕೋಸುಂಬರಿ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಸಹ , ಅಡಿಗೆ ತಯಾರಿಸುವಾಗ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆನೋ ಎನಿಸುತ್ತೆ. ಮೊದಲಿಗೆ ಅಡಿಗೆ ಶುರು ಮಾಡುವಾಗ. ಸಾಮಾನ್ಯವಾಗಿ ಎಲ್ಲರೂ ಕೋಸುಂಬರಿಗೆ ತಯಾರಿ ನಡೆಸುತ್ತಾರೆ. ಇದು ಬೇಯಿಸದೆ ಹಸಿಯಾಗಿ ಇರುವುದರಿಂದ ತಿಂದರೆ ಆರೋಗ್ಯಕ್ಕೂ ಅತ್ಯುತ್ತಮ.
ಹೆಸರುಬೇಳೆ ಕೋಸುಂಬರಿ:

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - ಒಂದು ಬಟ್ಟಲು
ಎಣ್ಣೆ, ಸಾಸಿವೆ, ಕರಿಬೇವು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಕಾಯಿತುರಿ ಸ್ವಲ್ಪ / ಜಾಸ್ತಿ
ಇಂಗು ಚಿಟಿಕೆ.

ತಯಾರಿಸುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಒಂದು ಗಂಟೆ ನೆನೆಸಿ. ನಂತರ ಅದನ್ನು ಬಸಿದುಕೊಳ್ಳಿ , ನೀರಿನ ಅಂಶ ಇರದಂತೆ ಸೋಸಿ.
ಒಗ್ಗರಣೆ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಮೆಣಸಿನಕಾಯಿಗಳು,ಶುಂಠಿ ಮತ್ತು ಇಂಗು ಹಾಕಿ . ಒಂದು/ಎರಡು ನಿಮಿಷ ಬಾಡಿಸಿ. ಈ ಒಗ್ಗರಣೆಗೆ ನೆನೆಸಿದ ಹೆಸರುಬೇಳೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಕೊತ್ತುಂಬರಿ ಸೊಪ್ಪುಮತ್ತು ಕಾಯಿತುರಿಗಳನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಕಲಸಿ. ಹೆಸರುಬೇಳೆ ಕೋಸುಂಬರಿ ತಯಾರಾಗುತ್ತದೆ. ಇದನ್ನು ಕೆಲವರು ಶ್ರೀ ರಾಮನವಮಿಗೆ ತಯಾರಿಸುತ್ತಾರೆ. ಇನ್ನು ಕೆಲವರು ಕಡಲೆಬೇಳೆ ಕೋಸುಂಬರಿ ಮಾಡುತ್ತಾರೆ. ಅವರವರ ಮನೆಯಲ್ಲಿ ನಡೆದು ಬಂದಂತೆ ತಯಾರಿಸಿಕೊಳ್ಳುತ್ತಾರೆ.ಇದು ಯಾವುದೇ ಊಟಕ್ಕಾದರೂ ಸೈಡ್ ಡಿಶ್ ತರಹ ಚೆನ್ನಾಗಿರುತ್ತದೆ.
* ಕೋಸುಂಬರಿಗಳಿಗೆ ಕಾಯಿತುರಿ ಹೆಚ್ಚಾಗಿ ಹಾಕಿ. ಚೆನ್ನಾಗಿರುತ್ತದೆ.
* ಹಬ್ಬ ಅಂತನೇ ಅಲ್ಲ ಇದನ್ನು ನಮ್ಮ ಊಟಕ್ಕೆ ನೆಂಚಿಕೊಳ್ಳಲು ಸಹ ತಯಾರಿಸಬಹುದು.

Thursday, September 11, 2008

BeetRoot Sabji/Palya - ಬೀಟ್ ರೂಟ್ ಪಲ್ಯ:

ಬೀಟ್ ರೂಟ್ ಪಲ್ಯ:

ಸಾಮಗ್ರಿಗಳು:

ಬೀಟ್ ರೂಟ್ ತುರಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ನಿಂಬೆರಸ
ಕಾಯಿತುರಿ
ಕೊತ್ತುಂಬರಿಸೊಪ್ಪು

ವಿಧಾನ:


ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಬೀಟ್ ರೂಟ್ ತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಸ್ವಲ್ಪ ಮಾತ್ರ ನೀರು ಚಿಮುಕಿಸಿ. ಈ ಪಲ್ಯವನ್ನು ಹೆಚ್ಚು ಬೇಯಿಸುವ ಅಗತ್ಯವಿಲ್ಲ, ಈ ರೀತಿ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ, ಪಲ್ಯದಲ್ಲಿ ಸಹ ಸ್ವಲ್ಪ ಬೇಯಿಸಿದರೆ ಸಾಕು. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Saturday, August 16, 2008

Cucumber-Carrot salad / ಸೌತೆಕಾಯಿ ಮತ್ತು ಕ್ಯಾರೆಟ್ ಸಲಾಡ್:


ಸೌತೆಕಾಯಿ ಮತ್ತು ಕ್ಯಾರೆಟ್ ಸಲಾಡ್:

ಸೌತೆಕಾಯಿ ಮತ್ತು ಕ್ಯಾರೆಟ್ ಅನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಅದರ ಮೇಲೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಉದುರಿಸಿ.ಇದು ಸರಳವಾದ ಸಲಾಡ್.

Wednesday, August 13, 2008

ಸೌತೆಕಾಯಿ ಚಟ್ನಿ/ Cucumber chutney

ಸೌತೆಕಾಯಿ ಚಟ್ನಿ:

ಸಾಮಗ್ರಿಗಳು:

ಸೌತೆಕಾಯಿ - ಒಂದು
ಕಾಯಿತುರಿ - ಒಂದು ಬಟ್ಟಲು
ಹುರಿಗಡಲೆ ಸ್ವಲ್ಪ
ಹುಣಸೆಹಣ್ಣು ಚೂರು
ಕೊತ್ತುಂಬರಿಸೊಪ್ಪು
ಹಸಿರು/ಒಣಮೆಣಸಿನಕಾಯಿಗಳು ರುಚಿಗೆ
ಉಪ್ಪು ರುಚಿಗೆ

ವಿಧಾನ:

ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ಬಿಡಿಸಿ, ತೊಳೆದು ಇಡಿ. ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಅದಕ್ಕೆ ಕಾಯಿತುರಿ,ಹುರಿಗಡಲೆ,ಹುಣಸೆಹಣ್ಣು,ಒಣ ಅಥವಾ ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ಹಾಕಿ,ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

Tuesday, August 12, 2008

Black Eye Beans - ಹಲಸಂದೆಕಾಳು ಉಸಲಿ:

ಹಲಸಂದೆಕಾಳು ಉಸಲಿ:

ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನಿಂಬೆರಸ ಸ್ವಲ್ಪ
ವಿಧಾನ:
ಹಲಸಂದೆಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ.ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ.

Sweet Dosa/dose/ ಬೆಲ್ಲದ ದೋಸೆ



ಬೆಲ್ಲದ ದೋಸೆ:

ಸಾಮಗ್ರಿಗಳು:

ಅಕ್ಕಿ - ಒಂದು ಕಪ್
ಬೆಲ್ಲ ರುಚಿಗೆ / ಒಂದು ಕಪ್
ಚಿಟಿಕೆ ಉಪ್ಪು
ಚಿಟಿಕೆ ಸೋಡ

ವಿಧಾನ;

ಅಕ್ಕಿಯನ್ನು ಮೂರ್ನಾಲ್ಕು ಗಂಟೆ ನೆನೆಸಿ, ಅದನ್ನು ಬೆಲ್ಲದೊಂದಿಗೆ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು, ಕಾಯಿಸಿ, ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ , ತೆಗೆಯಿರಿ. ತುಪ್ಪ ಹಾಕಿ ತಿನ್ನಲು ಕೊಡಿ. ಇದು ತಿನ್ನಲು ಕಜ್ಜಾಯದ ತರಹ ರುಚಿಯಾಗಿರುತ್ತದೆ.
*ಕಾಯಿತುರಿ ಬೇಕಾದವರು ಅಕ್ಕಿ ರುಬ್ಬುವಾಗ ಅದರ ಜೊತೆ ಬೆರೆಸಿ,ರುಬ್ಬಿ.

Sunday, July 20, 2008

Sprouted Green gram Masala / Molake kaalina saaru


ಮೊಳಕೆ ಹೆಸರು ಕಾಳಿನ ಮಸಾಲೆ ಸಾರು:
ಬೇಕಾಗುವ ಸಾಮಗ್ರಿಗಳು:

ಹೆಸರು ಕಾಳು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ತೆಂಗಿನಕಾಯಿ ತುರಿ-ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಕೊತ್ತುಂಬರಿ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ, ಕ್ಯಾರೆಟ್, ಬದನೆಕಾಯಿ,ಹುರುಳಿಕಾಯಿ)
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಹೆಸರುಕಾಳನ್ನು ಹಿಂದಿನ ದಿನವೇ ಬೆಳಗ್ಗೆ ಚೆನ್ನಾಗಿ ತೊಳೆದು,ನಾಲ್ಕು- ಐದು ಗಂಟೆಗಳು ನೆನೆಸಿ,ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ).ಈಗ ಮೊಳಕೆ/ಮಡಿಕೆ ಕಾಳು ರೆಡಿ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೆಣಸು,ಮೊಗ್ಗು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾಯಿ ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ತೆಂಗಿನಕಾಯಿ ತುರಿ,ಹುರಿಗಡಲೆ,ಗಸಗಸೆ,ಟಮೋಟೊ,ಅಚ್ಚಖಾರದ ಪುಡಿ ಮತ್ತು ಧನಿಯಾಪುಡಿ ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಮೂರ್ನಾಕು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ. ತುಂಬಾ ಬೇಯಿಸದಿರಿ. ಕಾಳುಗಳು ಬೇಗ ಮೆತ್ತಗಾಗಿ ಕರಗುತ್ತದೆ,ನೋಡಿಕೊಂಡು ಬೇಯಿಸಿ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ,ಪೂರಿ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.


* ಉಪ್ಪು ಮತ್ತು ಕಾರವನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿಕೊಳ್ಳಿ. ಕಾಳುಗಳು ನಿಮಗೆ ಬೇಕಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ.
*ಕಾಳುಗಳನ್ನು ಮೊಳಕೆ ಬರಿಸಲು - strainerನಲ್ಲಿ ಕಾಳನ್ನು ಹಾಕಿ ಅದನ್ನು ಮುಚ್ಚಿಟ್ಟು, ಅದರ ಕೆಳಗೆ ಅದಕ್ಕೆ ಸರಿಯಾದ ಒಂದು ಪಾತ್ರೆಯನ್ನು ಇಟ್ಟರೆ ಕೂಡ ಚೆನ್ನಾಗಿ ಮೊಳಕೆ ಬರುತ್ತದೆ.
**ಮೊಳಕೆ ಕಾಳು, ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

Upma / Uppittu- ಉಪ್ಪಿಟ್ಟು:


ಉಪ್ಪಿಟ್ಟು:
ಸಾಮಗ್ರಿಗಳು:

ರವೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೇ ಉಪ್ಪಿಟ್ಟನ್ನು ತಿನ್ನಬೇಕು ಇಲ್ಲವೆಂದರೆ ಹೆಸರಿಗೆ ತಕ್ಕಂತೆ ಕಾಂಕ್ರೀಟ್ ತರ ಗಟ್ಟಿಯಾಗುತ್ತದೆ.

Wednesday, July 16, 2008

ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:CarrotCabbageSalad


ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:


ಕ್ಯಾರೆಟ್ - ಒಂದು ಬಟ್ಟಲು
ಕ್ಯಾಬೇಜ್-ಒಂದು ಬಟ್ಟಲು
ಮಯನ್ನೈಸ್- ಎರಡು ದೊಡ್ಡ ಚಮಚ
ವಿನಿಗರ್-ಕಾಲು ಚಮಚ
ಮೆಣಸಿನಪುಡಿ
ಚಿಲ್ಲಿ ಸಾಸ್
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಕ್ಯಾರೆಟ್ ಮತ್ತು ಎಲೆಕೋಸು ತುರಿದುಕೊಳ್ಳಿ. ಅದಕ್ಕೆ ಮಯೊನ್ನೈಸ್(Mayonnaise),ಚಿಲ್ಲಿ ಸಾಸ್,ವಿನಿಗರ್,ಉಪ್ಪು ಮತ್ತು ಕಾಳುಮೆಣಸಿನಪುಡಿ,ಕೊತ್ತುಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಇದು ತುಂಬ ಟೇಸ್ಟೀ ಆಗಿರುತ್ತದೆ.

Friday, July 11, 2008

Sweet ShankaraPoli / ಸಿಹಿ ಶಂಕರ ಪೋಳಿ

ಸಿಹಿ ಶಂಕರ ಪೋಳಿ:

ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಬಟ್ಟಲು
ಸಕ್ಕರೆ ಪುಡಿ ಎರಡು ದೊಡ್ಡ ಚಮಚ/ರುಚಿಗೆ
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಎಣ್ಣೆ ಕರಿಯಲು


ವಿಧಾನ:

ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ಕಿತ್ತಳೆಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪಾತಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಚಾಕು ಅಥವಾ ಕಟ್ಟರ್ ನಿಂದ ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ತೆಗೆದು ಹಾಕಿ. ಬಾಣಲೆಗೆ ಎಷ್ಟು ಹಿಡಿಸುತ್ತದೋ ಅಷ್ಟು ಹಾಕಿ, ಅವೆಲ್ಲವೂ ಚೆನ್ನಾಗಿ ಬೆಂದು ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ತೆಳು ಕಂದು ಬಣ್ಣ ಬಂದ ನಂತರ ಬೇಗ ಎಲ್ಲವನ್ನು ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಎಷ್ಟು ದಿನ ಬೇಕಾದರೂ ಇಡಬಹುದು.ಸ್ವಲ್ಪ ಸಿಹಿ ಬಿಸ್ಕತ್ ತರಹ ಬರುವುದರಿಂದ ರುಚಿ ಚೆನ್ನಾಗಿರುತ್ತದೆ, ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Popular Posts