ಮೊಳಕೆ ಹೆಸರು ಕಾಳಿನ ಮಸಾಲೆ ಸಾರು:
ಬೇಕಾಗುವ ಸಾಮಗ್ರಿಗಳು:
ಹೆಸರು ಕಾಳು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ತೆಂಗಿನಕಾಯಿ ತುರಿ-ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಕೊತ್ತುಂಬರಿ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ, ಕ್ಯಾರೆಟ್, ಬದನೆಕಾಯಿ,ಹುರುಳಿಕಾಯಿ)
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
ಹೆಸರುಕಾಳನ್ನು ಹಿಂದಿನ ದಿನವೇ ಬೆಳಗ್ಗೆ ಚೆನ್ನಾಗಿ ತೊಳೆದು,ನಾಲ್ಕು- ಐದು ಗಂಟೆಗಳು ನೆನೆಸಿ,ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ).ಈಗ ಮೊಳಕೆ/ಮಡಿಕೆ ಕಾಳು ರೆಡಿ.
ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೆಣಸು,ಮೊಗ್ಗು,ಕೊತ್ತುಂಬರಿಸೊಪ್ಪು ಮತ್ತು ಹಸಿಮೆಣಸಿನಕಾಯಿ ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ತೆಂಗಿನಕಾಯಿ ತುರಿ,ಹುರಿಗಡಲೆ,ಗಸಗಸೆ,ಟಮೋಟೊ,ಅಚ್ಚಖಾರದ ಪುಡಿ ಮತ್ತು ಧನಿಯಾಪುಡಿ ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.
ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಮೂರ್ನಾಕು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ. ತುಂಬಾ ಬೇಯಿಸದಿರಿ. ಕಾಳುಗಳು ಬೇಗ ಮೆತ್ತಗಾಗಿ ಕರಗುತ್ತದೆ,ನೋಡಿಕೊಂಡು ಬೇಯಿಸಿ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ,ಪೂರಿ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.

* ಉಪ್ಪು ಮತ್ತು ಕಾರವನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿಕೊಳ್ಳಿ. ಕಾಳುಗಳು ನಿಮಗೆ ಬೇಕಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ.
*ಕಾಳುಗಳನ್ನು ಮೊಳಕೆ ಬರಿಸಲು - strainerನಲ್ಲಿ ಕಾಳನ್ನು ಹಾಕಿ ಅದನ್ನು ಮುಚ್ಚಿಟ್ಟು, ಅದರ ಕೆಳಗೆ ಅದಕ್ಕೆ ಸರಿಯಾದ ಒಂದು ಪಾತ್ರೆಯನ್ನು ಇಟ್ಟರೆ ಕೂಡ ಚೆನ್ನಾಗಿ ಮೊಳಕೆ ಬರುತ್ತದೆ.
**ಮೊಳಕೆ ಕಾಳು, ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.
No comments:
Post a Comment