Monday, September 15, 2008

ಹೆಸರುಬೇಳೆ ಕೋಸುಂಬರಿ / Moongdal Salad

ಯಾವುದೇ ಹಬ್ಬಗಳಿರಲಿ, ಸಂಭ್ರಮಗಳಿರಲಿ ಆ ಊಟದ ಎಲೆಯಲ್ಲಿ ಕೋಸುಂಬರಿ ಇರಲೇಬೇಕು. ಊಟ ಬಡಿಸುವಾಗ ಅದರದ್ದೇ ಆದ ಪ್ರಾಮುಖ್ಯತೆ ಕೋಸುಂಬರಿಗೆ ಇದೆ. ಕೋಸುಂಬರಿ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಸಹ , ಅಡಿಗೆ ತಯಾರಿಸುವಾಗ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆನೋ ಎನಿಸುತ್ತೆ. ಮೊದಲಿಗೆ ಅಡಿಗೆ ಶುರು ಮಾಡುವಾಗ. ಸಾಮಾನ್ಯವಾಗಿ ಎಲ್ಲರೂ ಕೋಸುಂಬರಿಗೆ ತಯಾರಿ ನಡೆಸುತ್ತಾರೆ. ಇದು ಬೇಯಿಸದೆ ಹಸಿಯಾಗಿ ಇರುವುದರಿಂದ ತಿಂದರೆ ಆರೋಗ್ಯಕ್ಕೂ ಅತ್ಯುತ್ತಮ.
ಹೆಸರುಬೇಳೆ ಕೋಸುಂಬರಿ:

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - ಒಂದು ಬಟ್ಟಲು
ಎಣ್ಣೆ, ಸಾಸಿವೆ, ಕರಿಬೇವು
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಕಾಯಿತುರಿ ಸ್ವಲ್ಪ / ಜಾಸ್ತಿ
ಇಂಗು ಚಿಟಿಕೆ.

ತಯಾರಿಸುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಒಂದು ಗಂಟೆ ನೆನೆಸಿ. ನಂತರ ಅದನ್ನು ಬಸಿದುಕೊಳ್ಳಿ , ನೀರಿನ ಅಂಶ ಇರದಂತೆ ಸೋಸಿ.
ಒಗ್ಗರಣೆ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಮೆಣಸಿನಕಾಯಿಗಳು,ಶುಂಠಿ ಮತ್ತು ಇಂಗು ಹಾಕಿ . ಒಂದು/ಎರಡು ನಿಮಿಷ ಬಾಡಿಸಿ. ಈ ಒಗ್ಗರಣೆಗೆ ನೆನೆಸಿದ ಹೆಸರುಬೇಳೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಕೊತ್ತುಂಬರಿ ಸೊಪ್ಪುಮತ್ತು ಕಾಯಿತುರಿಗಳನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ಕಲಸಿ. ಹೆಸರುಬೇಳೆ ಕೋಸುಂಬರಿ ತಯಾರಾಗುತ್ತದೆ. ಇದನ್ನು ಕೆಲವರು ಶ್ರೀ ರಾಮನವಮಿಗೆ ತಯಾರಿಸುತ್ತಾರೆ. ಇನ್ನು ಕೆಲವರು ಕಡಲೆಬೇಳೆ ಕೋಸುಂಬರಿ ಮಾಡುತ್ತಾರೆ. ಅವರವರ ಮನೆಯಲ್ಲಿ ನಡೆದು ಬಂದಂತೆ ತಯಾರಿಸಿಕೊಳ್ಳುತ್ತಾರೆ.ಇದು ಯಾವುದೇ ಊಟಕ್ಕಾದರೂ ಸೈಡ್ ಡಿಶ್ ತರಹ ಚೆನ್ನಾಗಿರುತ್ತದೆ.
* ಕೋಸುಂಬರಿಗಳಿಗೆ ಕಾಯಿತುರಿ ಹೆಚ್ಚಾಗಿ ಹಾಕಿ. ಚೆನ್ನಾಗಿರುತ್ತದೆ.
* ಹಬ್ಬ ಅಂತನೇ ಅಲ್ಲ ಇದನ್ನು ನಮ್ಮ ಊಟಕ್ಕೆ ನೆಂಚಿಕೊಳ್ಳಲು ಸಹ ತಯಾರಿಸಬಹುದು.

No comments:

Popular Posts