
ಎಲೆಕೋಸು ಕಡ್ಲೆಬೇಳೆ ಕೂಟು:
ಸಾಮಾಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಹೆಚ್ಚಿದ ಎಲೆಕೋಸು - ಒಂದು ಬಟ್ಟಲು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಒಂದು ಹಸಿಮೆಣಸಿನ ಕಾಯಿ ಮದ್ಯಕ್ಕೆ ಸೀಳಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಚೆಕ್ಕೆ,ಲವಂಗ
ಅರಿಶಿಣದ ಪುಡಿ
ಧನಿಯಾಪುಡಿ
ಖಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು
ವಿಧಾನ:
ಕಡ್ಲೆಬೇಳೆಯನ್ನು,ಎಣ್ಣೆ ಒಂದು ಚಮಚ,ಸ್ವಲ್ಪ ಅರಿಶಿಣ ಹಾಕಿ,ನೀರು ಹಾಕಿ ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು,(ಕಡ್ಲೆಬೇಳೆಯನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ಎಲೆಕೋಸು,ಸಾರಿನಪುಡಿ,ಖಾರದಪುಡಿ,ಧನಿಯಾಪುಡಿ,ಉಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಚೆನ್ನಾಗಿ ಬೆರೆಸಿ, ಎಲೆಕೋಸು ಬೇಯುವವರೆಗೂ ಬೇಯಿಸಿಕೊಳ್ಳಿ.ಕೋಸು ಬೇಗ ಬೇಯುವುದು.ಈ ಸಮಯದಲ್ಲಿ ಬೇಳೆ ಹದವಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ,ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಇದನ್ನು ಊಟಕ್ಕೆ ಅಥವಾ ಚಪಾತಿ,ರೊಟ್ಟಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.
* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ,ಸಾಸಿವೆ,ಚೆಕ್ಕೆ,ಲವಂಗ,ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಬೇಳೆಯನ್ನು ಮೊದಲು 5-10 ನಿಮಿಷ ಬೇಯಿಸಿಕೊಂಡು, ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.ಒಗ್ಗರಣೆ ಬೆರೆಸಿ,ಸರಿಯಾಗಿ ಕಲೆಸಿ,ಕಡ್ಲೆಬೇಳೆ ಎಲೆಕೋಸುಕೂಟು ರೆಡಿಯಾಗುತ್ತದೆ.
No comments:
Post a Comment