Thursday, January 29, 2009

Carrot Palya -ಕ್ಯಾರೆಟ್ ಪಲ್ಯ:

ಕ್ಯಾರೆಟ್ ಪಲ್ಯ:

ಸಾಮಗ್ರಿಗಳು:

ಕ್ಯಾರೆಟ್ ತುರಿ
ಎಣ್ಣೆ
ಜೀರಿಗೆ
ಹಸಿಮೆಣಸಿನಕಾಯಿ
ಕರಿಬೇವು
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:

ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಜೀರಿಗೆ,ಕರಿಬೇವು,ಹಸಿಮೆಣಸಿನಕಾಯಿ ಹಾಕಿ,ಕ್ಯಾರೆಟ್ ತುರಿಯನ್ನು ಹಾಕಿ,ಬೆರೆಸಿ. ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಮುಚ್ಚುಳ ಮುಚ್ಚಿ,ಕ್ಯಾರೆಟ್ ಅನ್ನು ಹಸಿಯಾಗಿಯೇ ಉಪಯೋಗಿಸುವುದರಿಂದ ಹೆಚ್ಚು ಬೇಯಿಸುವ ಅಗತ್ಯವಿಲ್ಲ.ಒಗ್ಗರಣೆಗೆ ಚೆನ್ನಾಗಿ ಬೆರೆಸಿ ಇಳಿಸಿದರೂ ಸಾಕು,ರುಚಿಯಾಗಿಯೇ ಇರುತ್ತದೆ. ಅದು ಬೆಂದಿದೆ ಎನಿಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಚಪಾತಿಗೆ ಮತ್ತು ಊಟಕ್ಕೆ ನೆಂಚಿಕೊಳ್ಳಲು ಉಪಯೋಗಿಸಬಹುದು.

Vermicelli / Shyavige Upma - ಶ್ಯಾವಿಗೆ ಉಪ್ಪಿಟ್ಟು:

ಶ್ಯಾವಿಗೆ ಉಪ್ಪಿಟ್ಟು:

ಸಾಮಗ್ರಿಗಳು:

ಶ್ಯಾವಿಗೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಟಮೋಟ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:


ಶ್ಯಾವಿಗೆಯನ್ನು ಒಂದೆರಡು ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ, ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ. ಅಂದರೆ ಶ್ಯಾವಿಗೆಯ ಬಣ್ಣ ಸ್ವಲ್ಪ ಬದಲಾಗಿ ಹೊಂಬಣ್ಣ ಬಂದ ನಂತರ ಇಳಿಸಿ.ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಟಮೋಟ ಹಾಕಿ ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ಶ್ಯಾವಿಗೆಯನ್ನು ಕುದಿಯುತ್ತಿರುವ ನೀರಿಗೆ ಹಾಕುತ್ತಾ,ಆಗೆ ಗಂಟು ಬರದಂತೆ ಎಲ್ಲವನ್ನು ಚೆನ್ನಾಗಿ ತಿರುಗಿಸುತ್ತಿರಿ,ಪೂರ್ತಿ ಶ್ಯಾವಿಗೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಲೇ ಶ್ಯಾವಿಗೆ ಉಪ್ಪಿಟ್ಟನ್ನು ತಿನ್ನಬೇಕು. ಬೇಕಾದರೆ ಇದರ ಜೊತೆ ಕಾಯಿಚಟ್ನಿ ಕೊಡಿ ಇನ್ನೂ ಚೆನ್ನಾಗಿರುತ್ತದೆ.
*ಟಮೋಟವನ್ನು ಹೆಚ್ಚಿಗೆ ಹಾಕಬಹುದು, ಆಗ ಇನ್ನು ರುಚಿ ಹೆಚ್ಚುತ್ತದೆ.

Tuesday, January 27, 2009

Milk Powder Burfi / ಹಾಲಿನಪುಡಿ ಬರ್ಫಿ:

ಹಾಲಿನಪುಡಿ ಬರ್ಫಿ:

ಬೇಕಾಗುವ ಸಾಮಗ್ರಿಗಳು:

ಹಾಲಿನಪುಡಿ - ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ಬೆಣ್ಣೆ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:

ಹಾಲಿನ ಪುಡಿಯನ್ನು ಹಾಲಿನೊಂದಿಗೆ ಗಂಟಿಲ್ಲದಂತೆ ಬೆರೆಸಿಕೊಳ್ಳಿ.
ಪಾತ್ರೆಗೆ ಸಕ್ಕರೆ ಮತ್ತು ಬೆರೆಸಿದ ಹಾಲನ್ನು ಹಾಕಿ ಬೆರೆಸಿ, ಅದಕ್ಕೆ ಸ್ವಲ್ಪ ಹೊತ್ತಿನ ನಂತರ ಬೆಣ್ಣೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ,ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.ತಿನ್ನಲು ಹಾಲಿನಪುಡಿ ಬರ್ಫಿ ತಯಾರಾಗುತ್ತದೆ.

Friday, January 23, 2009

Peas Curry - ಬಟಾಣಿ ಸಾರು:



ಬಟಾಣಿ ಸಾರು:

ಬೇಕಾಗುವ ಸಾಮಗ್ರಿಗಳು:

ಬಟಾಣಿ- ಎರಡು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ-
ಆಲೂಗೆಡ್ಡೆ,ಬದನೆಕಾಯಿ,
ಹುರುಳಿಕಾಯಿ,ಹೂಕೋಸು
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:

ಬಟಾಣಿ ತಾಜಾ ಅಥವ ಟಿನ್ ಅಥವ ಫ್ರೋಜ಼ನ್ ಕಾಳುಗಳಾದರೆ, ಆಗೇ ತಯಾರಿಸಬಹುದು, ಆದರೆ ಒಣಗಿದ ಕಾಳುಗಳಾದರೆ, ಹಿಂದಿನ ರಾತ್ರಿಯೇ ನೆನೆಸಿಡಬೇಕು.

ಮಸಾಲೆ ತಯಾರಿಸಲು:

ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ,ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಬಟಾಣಿಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ ಬಟಾಣಿಕಾಳು ಸಾರು ತಯಾರಾಗುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.ಈ ಮಸಾಲೆ ಸಾರಿಗೆ ರಾಗಿಮುದ್ದೆ ಕೂಡಾ ಚೆನ್ನಾಗಿರುತ್ತದೆ.

* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಈ ಬಟಾಣಿ ಸಾರು ಬಟಾಣಿ ಇಷ್ಟ ಪಡುವ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Monday, January 19, 2009

Hesarukaalina kurma-ಹೆಸರುಕಾಳು ತಾಳು:

ಹೆಸರುಕಾಳು ತಾಳು:

ಸಾಮಾಗ್ರಿಗಳು:
ಹೆಸರುಕಾಳು - ಒಂದು ಬಟ್ಟಲು
ವಿವಿಧರೀತಿಯ ಹೆಚ್ಚಿದ ತರಕಾರಿಗಳು-
ಕ್ಯಾರೆಟ್, ಆಲೂಗೆಡ್ಡೆ,
ನವಿಲುಕೋಸು,
ಹೂಕೋಸು, ಸೋರೆಕಾಯಿ,
ಟಮೋಟೋ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಎಣ್ಣೆ, ಸಾಸಿವೆ, ಕರಿಬೇವು
ಅರಿಶಿಣದ ಪುಡಿ
ಧನಿಯಾಪುಡಿ
ಕಾರದಪುಡಿ
ಸಾಂಬಾರ್ ಪುಡಿ (ಸಾರಿನ ಪುಡಿ)
ಉಪ್ಪು
ತೆಂಗಿನತುರಿ ಬೇಕಾದರೆ
ಕೊತ್ತುಂಬರಿಸೊಪ್ಪು

ವಿಧಾನ:

ಹೆಸರುಕಾಳನ್ನು,ಒಂದು ಚಮಚ ಎಣ್ಣೆ,ಸ್ವಲ್ಪ ಅರಿಶಿಣ ಹಾಕಿ,ಸ್ವಲ್ಪ ಗಟ್ಟಿಯಾಗಿಯೇ ಬೇಯಿಸಿಕೊಂಡು(ಹೆಸರುಕಾಳನ್ನು ತುಂಬಾ ಮೆತ್ತಗೆ ಅಥವಾ ನುಣ್ಣಗೆ ಬೇಯಿಸ ಬೇಡಿ) ಅದಕ್ಕೆ ಹೆಚ್ಚಿದ ತರಕಾರಿಗಳು,ಸಾರಿನಪುಡಿ,ಕಾರದಪುಡಿ,ಧನಿಯಾಪುಡಿ ಮತ್ತು ಉಪ್ಪು ಚೆನ್ನಾಗಿ ಬೆರೆಸಿ,ತರಕಾರಿಗಳು ಬೇಯುವವರೆಗೂ ಬೇಯಿಸಿಕೊಳ್ಳಿ.ಈ ಸಮಯದಲ್ಲಿ ಕಾಳು ಸರಿಯಾಗಿ ಬೇಯುತ್ತದೆ. ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತುಂಬರಿ ಸೊಪ್ಪು ಮತ್ತು ಒಗ್ಗರಣೆಯನ್ನು ಹಾಕಿ, ಚೆನ್ನಾಗಿ ಬೆರೆಸಿ,ಒಂದೆರಡು ನಿಮಿಷ ಕುದಿಸಿ,ಇಳಿಸಿ. ಈ ಕಾಳು ಅಥವಾ ತಾಳನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.ಇದನ್ನು ಊಟಕ್ಕೆ ಅಥವಾ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಲು ಕೊಡಿ.
* ಒಗ್ಗರಣೆ - ಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷ ಹದವಾಗಿ ಹುರಿದು ಅದನ್ನು ಬೆರೆಸಿ.
*ಕುಕ್ಕರ್ ನಲ್ಲಿ ತಯಾರಿಸುವುದಾದರೆ ಮೊದಲು ಸ್ವಲ್ಪ ಕಾಳನ್ನು ಬೇಯಿಸಿ,ಒಗ್ಗರಣೆ ಮತ್ತು ಎಲ್ಲವನ್ನೂ ಹಾಕಿ ಮುಚ್ಚಿಟ್ಟು ಒಂದು ಕೂಗು ಕೂಗಿಸಿ ಇಳಿಸಿ.

Saturday, January 17, 2009

Yoghurt Raita -ಮೊಸರು ರಾಯಿತ:

ಮೊಸರು ರಾಯಿತ:

ಮೊಸರಿಗೆ ,ಉಪ್ಪು,ಮೆಣಸಿನಪುಡಿ,ಹೆಚ್ಚಿದ ಕೊತ್ತುಂಬರಿಸೊಪ್ಪು ಮತ್ತು ಚಿಟಿಕೆ ಚಾಟ್ ಮಸಾಲಾ ಹಾಕಿ ಬೆರೆಸಿ. ಸಿಂಪಲ್ ರಾಯಿತ ರೆಡಿ.

****************************************

ಒಣದ್ರಾಕ್ಷಿ ಮತ್ತು ಅಂಜೂರದ ರಾಯಿತ:

ಮೊಸರಿಗೆ ದ್ರಾಕ್ಷಿಯನ್ನು ಮತ್ತು ಅಂಜೂರವನ್ನು ಪುಡಿಮಾಡಿ ಹಾಕಿ,ಉಪ್ಪು ಮತ್ತು ಮೆಣಸಿನಪುಡಿ ಉದುರಿಸಿ, ಬೆರೆಸಿ

Wednesday, January 14, 2009

Dosa/Masala Dose - ದೋಸೆ ಮತ್ತು ಮಸಾಲೆದೋಸೆ


ದೋಸೆ:

ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ;

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.ದೋಸೆಯೊಂದಿಗೆ ಸಾಗು ಕೂಡ ತುಂಬಾ ಚೆನ್ನಾಗಿರುತ್ತದೆ.

ಮಸಾಲೆದೋಸೆ:

ತವಾ ಮೇಲೆ ದೋಸೆಯನ್ನು ಮಾಡಿ, ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
* ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.

****************************************

ಖಾರಚಟ್ನಿ/ಕೆಂಪು ಚಟ್ನಿ:

ಕೆಂಪುಮೆಣಸಿನಕಾಯಿ / ಒಣಮೆಣಸಿನಕಾಯಿ
ಉಪ್ಪು
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ ಸ್ವಲ್ಪ

ವಿಧಾನ:

ಇವೆಲ್ಲವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ಕೆಂಪು ಚಟ್ನಿ ಅಥವ ಖಾರ ಚಟ್ನಿ ತಯಾರಾಗುತ್ತದೆ.

*****************************************
ಆಲೂಗೆಡ್ಡೆ ಪಲ್ಯ:

ಸಾಮಗ್ರಿಗಳು:
ಆಲೂಗೆಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ,ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು,ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಹಾಕಿ, ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ,ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ,ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.

***************************************

ಕಾಯಿಚಟ್ನಿ:

ಸಾಮಗ್ರಿಗಳು;
ಕಾಯಿತುರಿ
ಕಡ್ಲೆ
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಹಸಿಶುಂಠಿ
ಉಪ್ಪು
ಕೊತ್ತುಂಬರಿಸೊಪ್ಪು
ಪುದೀನ
ವಿಧಾನ:
ಚಟ್ನಿಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ ತೆಳ್ಳಗೆ ಬೇಕಾದರೆ ಮತ್ತೆ ಸ್ವಲ್ಪ ನೀರು ಸೇರಿಸ ಬಹುದು. ಚಟ್ನಿ ತಯಾರಾಗುತ್ತದೆ. ಬೇಕೆನಿಸಿದರೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಬಹುದು.

Friday, January 9, 2009

Moong gram Sabji - ಹೆಸರುಕಾಳು ಉಸಲಿ:

ಹೆಸರುಕಾಳು ಉಸಲಿ:

ಸಾಮಗ್ರಿಗಳು:
ಹೆಸರುಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ

ವಿಧಾನ:

ಹೆಸರುಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಹೆಸರುಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.

Wednesday, December 17, 2008

Tamarind Rice / ಹುಳಿ ಚಿತ್ರಾನ್ನ:

ಹುಳಿ ಚಿತ್ರಾನ್ನ:


ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ತಯಾರಿಸುವ ವಿಧಾನ:

ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಜೀರಿಗೆ, ಕರಿಬೇವು ,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಹುಣಸೇಹುಳಿಯ ಚಿತ್ರಾನ್ನ ತಯಾರಾಗುತ್ತದೆ.

Tuesday, December 16, 2008

ಹುರುಳಿಕಾಳಿನ ಮಸಾಲೆ ಸಾರು / Horse Gram Curry


ಹುರುಳಿಕಾಳು ಎಂದರೆ ಕೆಲವರು ಮೂಗು ಮುರಿಯುವುದುಂಟು! ಏಕೆಂದರೆ ಇದನ್ನು ಕುದುರೆ ಮತ್ತು ಹಸುಗಳಿಗೆ ಹಾಕಲು ಉಪಯೋಗಿಸುತ್ತಾರೆ.ಅವುಗಳಿಗೆ ಇದು ದಿನನಿತ್ಯದ ಆಹಾರ.ಇದರ ಹೆಸರೇ ಇಂಗ್ಲಿಷಿನಲ್ಲಿ Horse Gram ಎಂದು ಕರೆಯುತ್ತಾರೆಂದು ಎಲ್ಲರಿಗು ತಿಳಿದಿರುವ ವಿಷಯ.ಈ ಹುರುಳಿಕಾಳುಗಳನ್ನು ಕುದುರೆಗೆ ತಿನ್ನಿಸಲು ಹೆಚ್ಚಾಗಿ ಬಳಸುತ್ತಾರೆ. ಈ ಕಾಳುಗಳು ತುಂಬಾ ಪೌಷ್ಠಿಕವಾಗಿವೆ. ಇದು ತುಂಬಾ ಶಕ್ತಿ ಉಳ್ಳದ್ದಾಗಿದೆ. ಕೆಲವರು ಇದರಿಂದ ಸುಮಾರು ರೀತಿ ಅಡಿಗೆ ತಯಾರಿಸುತ್ತಾರೆ. ಇಲ್ಲಿ ತಿಳಿಸಿರುವುದು ನಾವು ತಯಾರಿಸುವಂತ ರುಚಿಯಾದ ಮೊಳಕೆ ಹುರುಳಿಕಾಳಿನ ಸಾರು.

ಹುರುಳಿಕಾಳಿನ ಮಸಾಲೆ ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳಿಕಾಳು- ಒಂದು ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ತೆಂಗಿನಕಾಯಿ -ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ -ಕ್ಯಾರೆಟ್
ಆಲೂಗೆಡ್ಡೆ
ಬದನೆಕಾಯಿ
ನವಿಲುಕೋಸು
ಹೂಕೋಸು
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.ಮೊಳಕೆ ಕಾಳು ತಯಾರಿಸುವ ಬಗೆ;

ಹುರುಳಿಕಾಳನ್ನು ಚೆನ್ನಾಗಿ ತೊಳೆದು, ಇವತ್ತು ಕಾಳುಗಳು ಬೇಕೆಂದರೆ ಅದನ್ನು ಎರಡು ದಿನದ ಹಿಂದಿನ ರಾತ್ರಿ ನೆನೆಸಿ, ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.


ಮಸಾಲೆ ತಯಾರಿಸಲು:

ಒಂದು ಚಮಚ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ,ಈರುಳ್ಳಿಯನ್ನು, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು, ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಅಚ್ಚಖಾರದ ಪುಡಿ, ಧನಿಯಾಪುಡಿ,ಗಸಗಸೆ,ಹುರಿಗಡಲೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ಹೆಚ್ಚಿದ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು,ಕಾಳುಗಳನ್ನು ಹಾಕಿ ಅದನ್ನು ಐದು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ನೀರು ಹಾಕಿ ಬೆರೆಸಿ ಮುಚ್ಚಿಟ್ಟು ಬೇಯಿಸಿ. ಕಾಳುಗಳು ಬೇಯುವವರೆಗು ಬೇಯಿಸಿ. ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ಇಳಿಸಿ. ಹುರುಳಿಕಾಳು ಸಾರು ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ &ಪರೋಟ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಈ ರೀತಿಯ ಸಾರುಗಳು ಮಾರನೆ ದಿನ ಹೆಚ್ಚು ರುಚಿಯಾಗಿರುತ್ತವೆ. ಹುರುಳೀಕಾಳು ತುಂಬಾ ಶಕ್ತಿದಾಯಕ ಮತ್ತು ಉಷ್ಣ . ಮೊಳಕೆ ಬರಿಸಿ ಉಪಯೋಗಿಸಿದರೆ ಸ್ವಲ್ಪ ತಂಪು. ಈ ಕಾಳುಗಳನ್ನು ತಿನ್ನುವುದರಿಂದ ಯಾವ ತೊಂದರೆಯು ಇಲ್ಲ. ಆರೋಗ್ಯಕ್ಕೂ ಒಳ್ಳೆಯದು.

Wednesday, December 3, 2008

Cardamom Rice - ಏಲಕ್ಕಿ ಅನ್ನ:

ಏಲಕ್ಕಿ ಅನ್ನ:

ಬಾಸುಮತಿ ಅಕ್ಕಿ - ಒಂದು ಬಟ್ಟಲು
ಜೀರಿಗೆ - ಒಂದು ಚಮಚ
ಏಲಕ್ಕಿ - ಎರಡು
ಲವಂಗ -ಎರಡು
ತುಪ್ಪ/ಬೆಣ್ಣೆ
ಉಪ್ಪು ರುಚಿಗೆ

ವಿಧಾನ:

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆ ಹಾಕಿಡಿ.
ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಮಾಡಿ ಜೀರಿಗೆ ಏಲಕ್ಕಿ ಮತ್ತು ಲವಂಗ ಹಾಕಿ ಹುರಿದು, ಅದಕ್ಕೆ ನೆನೆಸಿದ ಅಕ್ಕಿ ಹಾಕಿ, ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ, ಒಂದೆರಡು ನಿಮಿಷ ಹುರಿಯಿರಿ. ನಂತರ ಅಳತೆಗೆ ತಕ್ಕ ನೀರು ಸೇರಿಸಿ ,ಬೆರೆಸಿ. ಬೇಯಿಸಿ. ಅನ್ನವನ್ನು ತಯಾರಿಸಿ. ಏಲಕ್ಕಿ ಅನ್ನ ತಯಾರಾಗುತ್ತದೆ. ಈ ಅನ್ನವೂ ವೆಜ್ ಮತ್ತು ನಾನ್ ವೆಜ್ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯಾವುದಾದರೂ ಸಾಗು /ಕೂಟು ಜೊತೆ ಮತ್ತು ರಾಯತದೊಂದಿಗೆ ಕೊಡಿ.

Popular Posts