Wednesday, January 14, 2009

Dosa/Masala Dose - ದೋಸೆ ಮತ್ತು ಮಸಾಲೆದೋಸೆ


ದೋಸೆ:

ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ

ವಿಧಾನ;

ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.ದೋಸೆಯೊಂದಿಗೆ ಸಾಗು ಕೂಡ ತುಂಬಾ ಚೆನ್ನಾಗಿರುತ್ತದೆ.

ಮಸಾಲೆದೋಸೆ:

ತವಾ ಮೇಲೆ ದೋಸೆಯನ್ನು ಮಾಡಿ, ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
* ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.

****************************************

ಖಾರಚಟ್ನಿ/ಕೆಂಪು ಚಟ್ನಿ:

ಕೆಂಪುಮೆಣಸಿನಕಾಯಿ / ಒಣಮೆಣಸಿನಕಾಯಿ
ಉಪ್ಪು
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ ಸ್ವಲ್ಪ

ವಿಧಾನ:

ಇವೆಲ್ಲವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ಕೆಂಪು ಚಟ್ನಿ ಅಥವ ಖಾರ ಚಟ್ನಿ ತಯಾರಾಗುತ್ತದೆ.

*****************************************
ಆಲೂಗೆಡ್ಡೆ ಪಲ್ಯ:

ಸಾಮಗ್ರಿಗಳು:
ಆಲೂಗೆಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:
ಮೊದಲಿಗೆ ಆಲೂಗೆಡ್ಡೆಯನ್ನು ಸಿಪ್ಪೆ ಸಮೇತ ಬೇಯಿಸಿಕೊಳ್ಳಿ,ನಂತರ ತಣ್ಣಗಾದ ಮೇಲೆ ಸಿಪ್ಪೆ ತೆಗೆದು,ಪುಡಿ ಅಂದರೆ ಅದನ್ನು ಕೈನಲ್ಲಿಯೇ ಅದುಮಿದರೆ ಸಾಕು ಪುಡಿಯಾಗುತ್ತದೆ.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ,ಕಾದ ಬಳಿದ ಸಾಸಿವೆ,ಜೀರಿಗೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ, ಹಾಕಿ, ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಮತ್ತು ಅರಿಶಿನ ಹಾಕಿ,ಪುಡಿ ಮಾಡಿದ ಆಲೂಗೆಡ್ಡೆಯನ್ನು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಅದನ್ನು ಬೆರೆಸಿದ ಮೇಲೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ದೋಸೆಗೆ,ಚಪಾತಿಗೆ ಮತ್ತು ಪೂರಿಗೆ ಜೊತೆಯಾಗಿ ತಿನ್ನಲು ಉಪಯೋಗಿಸಬಹುದು.

***************************************

ಕಾಯಿಚಟ್ನಿ:

ಸಾಮಗ್ರಿಗಳು;
ಕಾಯಿತುರಿ
ಕಡ್ಲೆ
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಹಸಿಶುಂಠಿ
ಉಪ್ಪು
ಕೊತ್ತುಂಬರಿಸೊಪ್ಪು
ಪುದೀನ
ವಿಧಾನ:
ಚಟ್ನಿಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ ತೆಳ್ಳಗೆ ಬೇಕಾದರೆ ಮತ್ತೆ ಸ್ವಲ್ಪ ನೀರು ಸೇರಿಸ ಬಹುದು. ಚಟ್ನಿ ತಯಾರಾಗುತ್ತದೆ. ಬೇಕೆನಿಸಿದರೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಬಹುದು.

No comments:

Popular Posts