Tuesday, October 23, 2007

Tomato Juice - ಟಮೋಟೋಹಣ್ಣಿನ ಶರಬತ್ತು:

ಟಮೋಟೋಹಣ್ಣಿನ ಶರಬತ್ತು:

ಸಾಮಗ್ರಿಗಳು:
ಟಮೋಟ ಹಣ್ಣುಗಳು
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ

ವಿಧಾನ:

ನೀರಿಗೆ ಟಮೋಟೋ ಹಣ್ಣು,ಸಕ್ಕರೆ,ಉಪ್ಪು,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ,ಚೆನ್ನಾಗಿ ರುಬ್ಬಿಕೊಂಡು ಅದನ್ನು ಸೋಸಿದರೆ,ಟಮೋಟ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ಪಾನಕ, ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ.ಟಮೋಟದಲ್ಲಿ ಶಕ್ತಿವರ್ಧಕ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಮತ್ತು ದೇಹಕ್ಕೂ ಒಳ್ಳೆಯದು.

Monday, October 22, 2007

Groundnut Burfi-ಕಡ್ಲೆಕಾಯಿ ಮಿಠಾಯಿ /ಬರ್ಫಿ

ಕಡ್ಲೆಕಾಯಿ ಬರ್ಫಿ:

ಸಾಮಗ್ರಿಗಳು:
ಒಂದು ಬಟ್ಟಲು ಕಡ್ಲೆಕಾಯಿಬೀಜ
ಒಂದು ಬಟ್ಟಲು ಅಥವಾ ರುಚಿಗೆ -ಬೆಲ್ಲ/ಸಕ್ಕರೆ

ವಿಧಾನ:
ಕಡ್ಲೆಕಾಯಿಬೀಜಗಳನ್ನು ಹುರಿದು, ತರಿ / ಸ್ವಲ್ಪ ದಪ್ಪಗೆ ಪುಡಿ ಮಾಡಿಕೊಳ್ಳಿ.
ಪಾತ್ರೆಗೆ ಸ್ವಲ್ಪ ನೀರು ಹಾಕಿ, ಬೆಲ್ಲ ಅಥವಾ ಸಕ್ಕರೆ ಹಾಕಿ, ಸ್ವಲ್ಪ ಎಳೆಪಾಕ ಬರುವಾಗ, ಕಡ್ಲೆಕಾಯಿಬೀಜದ ಪುಡಿಯನ್ನು ಹಾಕಿ, ಗೊಟಾಯಿಸುತ್ತಿರಿ, ಕೈ ಬಿಡದೇ ತಿರುಗಿಸಿ. ಗಟ್ಟಿಯಾಗುತ್ತಿದೆ ಎನಿಸಿದಾಗ, ಜಿಡ್ಡು ಸವರಿದ ತಟ್ಟೆ ಅಥವಾ ಮಣೆ ಮೇಲೆ ಹಾಕಿ, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

Tuesday, October 16, 2007

Cucumber Simple Salad/ ಸೌತೆಕಾಯಿ ಸಲಾಡ್

ಸೌತೆಕಾಯಿ ಸಲಾಡ್:

ಸೌತೆಕಾಯಿಯನ್ನು ಹೇಗೆ ಬೇಕೋ ಆಗೆ ಹೆಚ್ಚಿಕೊಂಡು, ಅದಕ್ಕೆ ಉಪ್ಪು ಮತ್ತು ಮೆಣಸಿನಪುಡಿ ಉದುರಿಸಿ.

********************************

ಸೌತೆಕಾಯಿ ಸ್ಲೈಸ್:

ಹಸಿಮೆಣಸಿನಕಾರ ತಯಾರಿಸಲು-
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು ಮತ್ತು ಉಪ್ಪು ರುಬ್ಬಿಕೊಳ್ಳಿ.

ಸೌತೆಕಾಯಿ ಉದ್ದಕ್ಕೆ ಸೀಳಿಕೊಂಡು ಉದ್ದಕ್ಕೆ ಕತ್ತರಿಸಿ. ಅದಕ್ಕೆ ಉಪ್ಪು ಮತ್ತು ಹಸಿಮೆಣಸಿನಕಾರವನ್ನು ಹಚ್ಚಿ. ಮೇಲೆ ನಿಂಬೆರಸ ಹಿಂಡಿ.
*ವೇಳೆ ಕೂಡ ಜಾಸ್ತಿ ತೆಗೆದುಕೊಳ್ಳುವುದಿಲ್ಲ,ತಯಾರಿಸುವುದು ಸುಲಭವಾದರೂ ರುಚಿ ಮಾತ್ರ ಬಹಳ ಚೆನ್ನಾಗಿರುತ್ತವೆ.

Aloo Peas Curry /ಆಲೂ-ಬಟಾಣಿ ಮಸಾಲೆ:


ಆಲೂ-ಬಟಾಣಿ ಮಸಾಲೆ:
ಬೇಕಾಗುವ ಸಾಮಗ್ರಿಗಳು;
ಬಟಾಣಿ
ಆಲೂಗೆಡ್ಡೆಯನ್ನು ಹೆಚ್ಚಿಕೊಳ್ಳಿ
ಹೆಚ್ಚಿದ ಈರುಳ್ಳಿ
ಒಂದು ಹಸಿಮೆಣಸಿನಕಾಯಿ
ಅಚ್ಚಖಾರದಪುಡಿ
ಧನಿಯ
ಜೀರಿಗೆಪುಡಿ
ಗರಂಮಸಾಲಾ
ಕೊತ್ತುಂಬರಿಸೊಪ್ಪು
ಎಣ್ಣೆ, ಜೀರಿಗೆ, ಕರಿಬೇವು
ಉಪ್ಪು ರುಚಿಗೆ

ವಿಧಾನ;
ಪಾತ್ರೆಗೆ ಎಣ್ಣೆಯನ್ನು ಹಾಕಿ, ಜೀರಿಗೆ ಹಾಕಿ ಚಟಪಟ ಅಂದಾಗ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಎರಡು ನಿಮಿಷದ ನಂತರ ಆಲೂಗೆಡ್ಡೆಯನ್ನು ಹಾಕಿ. ಒಂದೆರಡು ನಿಮಿಷ ಹುರಿದು ಬಟಾಣಿ ಕಾಳುಗಳನ್ನು ಹಾಕಿ,ಅದರ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಐದಾರು ನಿಮಿಷ ಹುರಿದು,ಕಾರದಪುಡಿ,ಧನಿಯ ಮತ್ತು ಜೀರಿಗೆಪುಡಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ,ಬಟಾಣಿ ಮತ್ತು ಆಲೂಗೆಡ್ಡೆ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ. ಒಂದು ನಿಮಿಷದ ನಂತರ ಇಳಿಸಿ,ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಈ ಮಸಾಲೆಯನ್ನು ಚಪಾತಿ ಮತ್ತು ಪರೋಟದೊಂದಿಗೆ ನೀಡಬಹುದು.
* ಹಸಿಬಟಾಣಿ ಉಪಯೋಗಿಸುವವರು ನೇರವಾಗಿ ಒಗ್ಗರಣೆಗೆ ಸೇರಿಸಿ.
* ಒಣಗಿದ ಬಟಾಣಿ ಉಪಯೋಗಿಸುವವರು ನಾಲ್ಕು-ಐದು ಗಂಟೆ ನೆನೆಸಿ.

Friday, October 12, 2007

Chapathi - ಚಪಾತಿ

ಚಪಾತಿ:

ಸಾಮಗ್ರಿಗಳು:
ಗೋಧಿಹಿಟ್ಟು
ಸ್ವಲ್ಪ ಹಾಲು
ಎಣ್ಣೆ ಎರಡು ಚಮಚ
ಉಪ್ಪು

ವಿಧಾನ:

ಗೋಧಿಹಿಟ್ಟಿಗೆ, ಉಪ್ಪು , ಎಣ್ಣೆ ಹಾಕಿ ಬೆರೆಸಿ, ಅದಕ್ಕೆ ಹಾಲು ಮತ್ತು ಬೇಕಾಗುವಷ್ಟು ಮಾತ್ರ ನೀರನ್ನು ಹಾಕಿಕೊಂಡು ಕಲೆಸಿ. ಅರ್ಧ/ ಒಂದು ಗಂಟೆ ಬಿಟ್ಟು ಚಪಾತಿ ಲಟ್ಟಿಸಿ. ಕಾದ ತವಾ ಮೇಲೆ ಬೇಯಿಸಿ, ಎರಡು ಬದಿಯೂ ಎಣ್ಣೆ ಹಾಕಿ. ಇದು ಎಲ್ಲಾ ತರಹದ ಗೊಜ್ಜು, ಸಾರು, ಚಟ್ನಿ ಮತ್ತು ಪಲ್ಯ ಎಲ್ಲಕ್ಕೂ ಸೇರಿಸಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಹಿತಕರ ಮತ್ತು ಪೌಷ್ಠಿಕವಾಗಿಯೂ ಇರುತ್ತದೆ.

Thursday, October 11, 2007

Baadam Puris/almond puris/ಬಾದಾಮಿ ಸಿಹಿ ಪೂರಿ

ಬಾದಾಮಿ ಸಿಹಿ ಪೂರಿ:
ಸಾಮಗ್ರಿಗಳು:

ಬಾದಾಮಿ - ಒಂದು ಕಪ್
ಮೈದಾಹಿಟ್ಟು - ಒಂದು ಬಟ್ಟಲು
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಕೇಸರಿಬಣ್ಣ ಚಿಟಿಕೆ
ಚಿಟಿಕೆ ಉಪ್ಪು
ಸಕ್ಕರೆ - ಎರಡು ಕಪ್
ಕೊಬ್ಬರಿತುರಿ ಸ್ವಲ್ಪ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

-ಮೊದಲು ಬಾದಾಮಿಯನ್ನು ಪೇಸ್ಟ್ ತರಹ ತಯಾರಿಸಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬಬೇಡಿ.
-ಬೇರೆ ಪಾತ್ರೆಯಲ್ಲಿ ಸಕ್ಕರೆ ಮತ್ತು ಒಂದು ಲೋಟ ನೀರು ಹಾಕಿ, ಅದನ್ನು ಕುದಿಸಿ, ಸ್ವಲ್ಪ ಗಟ್ಟಿ ಪಾಕ ಬಂದ ನಂತರ ಅದನ್ನು ತೆಗೆದಿಡಿ.
-ಮೈದಾ,ಡಾಲ್ಡ,ಕೇಸರಿಬಣ್ಣ ಮತ್ತು ಉಪ್ಪು ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಅರ್ಧಗಂಟೆ ಮುಚ್ಚಿಡಿ. ನಂತರ ಹಿಟ್ಟಿನಿಂದ ದಪ್ಪನೆಲ್ಲಿಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಅದಕ್ಕೆ ಬಾದಾಮಿ ಪೇಸ್ಟ್ ಅನ್ನು ಸವರಿ ಪೂರಿಯನ್ನು ಮೊದಲು ಮಧ್ಯಕ್ಕೆ ಮಡಿಸಿ,ಮತ್ತೆ ಮಡಿಸಿ ಅಂದರೆ ಅದು ತ್ರಿಕೋನಾಕಾರದಲ್ಲಿ ಬರಬೇಕು.ಅದಕ್ಕೆ ತುದಿಗೆ ಒಂದು ಲವಂಗ ಸಿಕ್ಕಿಸಿ, ಆಮೇಲೆ ಅದನ್ನು ಕಾದಿರುವ ಎಣ್ಣೆಯಲ್ಲಿ ತೆಗೆದು ಹಾಕಿ.ಬೇಯಿಸಿ, ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ಎರಡು ಬದಿ ಚೆನ್ನಾಗಿ ಬೇಯಿಸಿ, ಬಂಗಾರದ ಬಣ್ಣ ಬಂದ ನಂತರ ಬೇಗ ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ತಕ್ಷಣವೇ ಸಕ್ಕರೆ ಪಾಕಕ್ಕೆ ಹಾಕಿ ತೆಗೆದು, ದೊಡ್ಡ ತಟ್ಟೆಯಲ್ಲಿ ಜೋಡಿಸಿ. ತಕ್ಷಣ ಹಾಕಿದರೆ ಸಕ್ಕರೆಪಾಕವನ್ನು ಅದು ಹೀರಿಕೊಳ್ಳುತ್ತದೆ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ತಿನ್ನಬಹುದು ಅಥವಾ ಬಿಸಿ ಇರುವಾಗಲು ನೀಡಬಹುದು, ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
*ಕೊಬ್ರಿ ತುರಿಗೆ ಬಣ್ಣ ಸೇರಿಸಿ ಕಲರ್ ಫುಲ್ ಆಗಿಯೂ ತಯಾರಿಸಬಹುದು. ಕೊಬ್ಬರಿತುರಿ ಬೇಕಾದರೆ ಹಾಕಬಹುದು ನಿಮ್ಮಿಷ್ಟ.
*ಪೂರಿಯ ಮೇಲೆ ಬೇಕೆನಿಸಿದರೆ ಒಂದೊಂದು ಬಾದಾಮಿ ಇಟ್ಟು ಸರ್ವ್ ಮಾಡಬಹುದು.
*ಇದು ಬೇಗ ಹಾಳಾಗುವುದಿಲ್ಲ. ತಕ್ಷಣವೇ ತಿನ್ನಬೇಕು ಅಂತ ಇಲ್ಲ. ಎರಡು-ಮೂರು ದಿನ ಕೂಡ ಇಟ್ಟು ತಿನ್ನಬಹುದು.

Wednesday, October 10, 2007

Karbujahannina Seekarane /Muskmelon delight

ಕರಬೂಜಹಣ್ಣಿನ ಸೀಕರಣೆ:
ಬೇಕಾಗುವ ಸಾಮಗ್ರಿಗಳು:
ಕರಬೂಜಹಣ್ಣು
ಬೆಲ್ಲದಪುಡಿ ರುಚಿಗೆ
ಅವಲಕ್ಕಿ -2 ಟೇಬಲ್ ಚಮಚ
ಹಾಲು - 1/2 ಕಪ್
ತೆಂಗಿನಹಾಲು-1/2 ಕಪ್
ಏಲಕ್ಕಿಪುಡಿ- ಸ್ವಲ್ಪ
ಜೇನುತುಪ್ಪ-2ಟೇಬಲ್ ಚಮಚ

ವಿಧಾನ:
ಕರಬೂಜ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಅವಲಕ್ಕಿ,ಬೆಲ್ಲದಪುಡಿ,ತೆಂಗಿನಗಟ್ಟಿಹಾಲು,ಹಾಲು,ಏಲಕ್ಕಿಪುಡಿ ಮತ್ತು ಜೇನುತುಪ್ಪವನ್ನು ಹಾಕಿ, ಚೆನ್ನಾಗಿ ಬೆರೆಸಿ, ಸರ್ವ್ ಮಾಡಿ. ತಣ್ಣಗೆ ಇಷ್ಟಪಡುವವರು ಫ್ರಿಡ್ಜ್ ನಲ್ಲಿಟ್ಟು ತಿನ್ನಬಹುದು.

Sunday, September 30, 2007

Potato bajji /Aalugedde bajji-ಆಲೂಗೆಡ್ಡೆ ಬಜ್ಜಿ


ಆಲೂಗೆಡ್ಡೆ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಆಲೂಗೆಡ್ಡೆ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಅಚ್ಚಖಾರದ ಪುಡಿ
ಓಮಕಾಳು ಸ್ವಲ್ಪ
ಕಾದ ಎಣ್ಣೆ - ಒಂದು ಚಮಚ
ಚಿಟಿಕೆ ಸೋಡ
ಉಪ್ಪು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಆಲೂಗೆಡ್ಡೆ ಸಿಪ್ಪೆ ತೆಗೆದು,ತೆಳುವಾಗಿ (ತುಂಬಾ ತೆಳುವಾಗಿ ಅಲ್ಲ. ಸ್ವಲ್ಪ ದಪ್ಪ ಇರಲಿ)ಹೆಚ್ಚಿಕೊಂಡು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ.
ಕಡ್ಲೆಹಿಟ್ಟು,ಅಕ್ಕಿಹಿಟ್ಟು,ಓಮಕಾಳು,ಉಪ್ಪು,ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ,ಅದಕ್ಕೆ ಕಾದಿರುವ ಎಣ್ಣೆ ಹಾಕಿ,ಜೊತೆಯಲ್ಲಿ ನೀರು ಹಾಕಿ,ಕಲೆಸಿಕೊಳ್ಳಿ,ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು,ಅದು ಕಾದ ನಂತರ,ಹೆಚ್ಚಿರುವ ಆಲೂಗೆಡ್ಡೆಯ ಸ್ಲೈಸ್ ಅನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ,ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ,ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಹೆಚ್ಚುವರಿ ಎಣ್ಣೆ ಹೀರಿಕೊಳ್ಳುತ್ತದೆ. ರುಚಿರುಚಿಯಾದ ಆಲೂಗೆಡ್ಡೆ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಕೆಚಪ್ ಕೂಡ ಓಕೆ.

Saturday, September 29, 2007

Khaarada Puris/Spicy puris-ಖಾರದ ಪೂರಿ:

ಖಾರದ ಪೂರಿ:

ಸಾಮಗ್ರಿಗಳು:
ಗೋಧಿಹಿಟ್ಟು- ಒಂದು ಕಪ್
ಅಕ್ಕಿಹಿಟ್ಟು - ಅರ್ಧ ಕಪ್
ಮೈದಾಹಿಟ್ಟು- ಎರಡು ಚಮಚ
ಈರುಳ್ಳಿ
ಹಸಿಮೆಣಸಿನಕಾಯಿ
ತೆಂಗಿನತುರಿ
ಕೊತ್ತುಂಬರಿ
ಕರಿಬೇವು
ಉಪ್ಪು
ಎಣ್ಣೆ

ವಿಧಾನ:

ಮೊದಲು ತೆಂಗಿನತುರಿ,ಈರುಳ್ಳಿ,ಹಸಿಮೆಣಸಿನಕಾಯಿ,ಕರಿಬೇವು,ಕೊತ್ತುಂಬರಿ ಮತ್ತು ಉಪ್ಪು ಸೇರಿಸಿ, ಸ್ವಲ್ಪ ತರಿಯಾಗಿ ರುಬ್ಬಿಕೊಳ್ಳಿ.
ಗೋಧಿಹಿಟ್ಟು,ಅಕ್ಕಿಹಿಟ್ಟು ಮತ್ತು ಮೈದಾಹಿಟ್ಟು ಎಲ್ಲಾ ಸೇರಿಸಿ, ಚೆನ್ನಾಗಿ ಬೆರೆಸಿ, ಅದಕ್ಕೆ ಕಾಯಿಸಿರುವ ಎರಡು ಚಮಚ ಎಣ್ಣೆ ಮತ್ತು ರುಬ್ಬಿದ ಮಿಶ್ರಣ ಹಾಕಿ,ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ,ಚಿಕ್ಕ ಉಂಡೆ ಮಾಡಿಕೊಂಡು,ಪೂರಿ ತರಹ ಲಟ್ಟಿಸಿ, ಕಾದಿರುವ ಎಣ್ಣೆಯಲ್ಲಿ ಕರಿಯಿರಿ.

Wednesday, September 26, 2007

Tomato Cucumaber Salad/ಟಮೋಟ ಸೌತೆಕಾಯಿ ಸಲಾಡ್

ಟಮೋಟ ಸೌತೆಕಾಯಿ ಸಲಾಡ್:

ಟಮೋಟ
ಸೌತೆಕಾಯಿ
ಈರುಳ್ಳಿ
ಕ್ಯಾರೆಟ್ ತುರಿ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ (ಬೇಕಾದರೆ)
ಕಾರದ ಪುಡಿ
ಉಪ್ಪು

ವಿಧಾನ:

ಟಮೋಟ ಮತ್ತು ಸೌತೆಕಾಯಿಯನ್ನು ಬಿಲ್ಲೆಗಳನ್ನಾಗಿ (ಸ್ಲೈಸ್) ಮಾಡಿಕೊಳ್ಳಿ.
ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಕೊತ್ತುಂಬರಿಸೊಪ್ಪು, ಉಪ್ಪು ಮತ್ತು ಕಾರದ ಪುಡಿ ಸಿದ್ಧ ಮಾಡಿಕೊಳ್ಳಿ.
ಮೊದಲು ಅಗಲವಾದ ತಟ್ಟೆ / ಟ್ರೇ ನಲ್ಲಿ ಸೌತೆಕಾಯಿ ಜೋಡಿಸಿ, ಅದರ ಮೇಲೆ ಟಮೋಟ ಇಡಿ.ಅದರ ಮೇಲೆ ಉಪ್ಪು,ಕಾರ ಉದುರಿಸಿ,
ನಿಂಬೆರಸ ಹಾಕಿ,ಮತ್ತೆ ಮೇಲೆ ಕ್ಯಾರೆಟ್ ತುರಿ ಮತ್ತು ಕೊತ್ತುಂಬರಿಸೊಪ್ಪನ್ನು ಉದುರಿಸಿ. ಇದು ತುಂಬಾ ರುಚಿಯಾದ ಸಲಾಡ್.
*ಬೇಕೆನಿಸಿದರೆ ಕಾಯಿತುರಿ ಸಹ ಹಾಕಿಕೊಳ್ಳಬಹುದು. ಇನ್ನು ರುಚಿ ಹೆಚ್ಚುತ್ತದೆ.
*ಇನ್ನೂ ರುಚಿ ಬೇಕಾದರೆ ಸೇವ್ ಕೂಡ ಉದುರಿಸಿ,ತಿನ್ನಬಹುದು.

Tuesday, September 25, 2007

BisiBeleBath -Bcube / ಬಿಸಿಬೇಳೆಭಾತ್

ಬಿಸಿಬೇಳೆಬಾತ್ ತಯಾರಿಸುವಾಗಲೆಲ್ಲ ನನ್ನ ಅಮ್ಮನ ನೆನಪು ಬರುತ್ತದೆ. ಅವರು ಇದನ್ನು ತಯಾರಿಸುತ್ತಿದ್ದಂತ ರೀತಿ,ಅದಕ್ಕಾಗಿಯೇ ಎಷ್ಟು ಆಸಕ್ತಿಯಿಂದ ತಯಾರಿ ಮಾಡುತ್ತಿದ್ದರು. ಅದಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಹದವಾಗಿ ಹುರಿದು. ಎಲ್ಲಾ ಸರಿಯಾಗಿ ರೆಡಿಮಾಡಿಕೊಂಡು,ತಯಾರಿಸುತ್ತಿದ್ದರು. ಬಿಸಿಬೇಳೆಬಾತ್ ತಿನ್ನುವುದಕ್ಕೆ ಕಾಯುತ್ತಿದ್ದೆವು. ಸದಾ ಅದು ಒಂದು ತಿಂಡಿ ಲಿಸ್ಟ್ ನಲ್ಲಿ ಸೇರಿಕೊಂಡಿದ್ದರು ಸಹ,ಅದೇನೋ ಅಮ್ಮ ತಯಾರಿಸುತ್ತಿದ್ದುದರಿಂದ ಆ ರುಚಿಗೆ ತಿನ್ನಲು ಕಾಯುತ್ತಿದ್ದೆವು. ಜೊತೆಗೆ ಮೊದಲೇ ತಂದ ಚಿಪ್ಸ್ ಮತ್ತು ಖಾರಬೂಂದಿ ಜೊತೆ ಅದರ ಗಮ್ಮತ್ತೇ ಬೇರೆ. ಇದಲ್ಲದೇ ಯಾವುದಾದರು ಸಣ್ಣ ಪುಟ್ಟ ಪಾರ್ಟಿಗಳಿಗೆ ಬೇರೆ ಅಡಿಗೆ ಮತ್ತು ಸಿಹಿ ಜೊತೆ ಇದು ಖಾಯಂ,ಜೊತೆಗೆ ಮೆಣಸಿನಕಾಯಿ ಬಜ್ಜಿ ಕೂಡ. ಅಮ್ಮನಿಗೆ ಎಲ್ಲವು ಚೆನ್ನಾಗಿರಬೇಕು. ಅವರು ತಯಾರಿಸುತ್ತಿದ್ದ ಎಲ್ಲಾ ಅಡಿಗೆಗಳು ಸೂಪರ್ಬ್!! ಅವರಿಗೆ ಚೆನ್ನಾಗಿತ್ತು ಎಂದರೆ ಸಾಕು ಅಷ್ಟಕ್ಕೆ ಅದೇನು ಸಂತಸಪಡುತ್ತಿದ್ದರು. ಅಜ್ಜಿ ಮತ್ತು ಅಮ್ಮಗಳ ಅಡಿಗೆಯೇ ನಾವಿಂದು ಸುಮಾರು ತಯಾರಿಸುತ್ತೇವೆ. ಅವರ ಕೈರುಚಿ ತುಂಬಾ ಚೆನ್ನಾಗಿರುತ್ತಿತ್ತು. ಅದು ಹೇಳಲು ಮಾತೇ ಇಲ್ಲ ಎನಿಸುತ್ತೆ. ನಾವೇ ಧನ್ಯರು!! ಈಗ ಇಲ್ಲಿ ನಾನು ಅದೇ ರೀತಿ ತಯಾರಿಸುವ ಬಿಸಿಬೇಳೆಬಾತ್ ತಿಳಿಸಿರುವೆ. ಅದೇ ರುಚಿಗೆ ಮೋಸ ಇಲ್ಲ ಅನ್ಕೊತಿನಿ, ಸ್ವಲ್ಪ ಪರವಾಗಿಲ್ಲವೇನೋ. ಅವರಷ್ಟು ಅಲ್ಲದಿದ್ದರು ಒಕೆ. ಹೇಗಿದೆ ಅಂತ ನೀವು ತಯಾರಿಸಿ ನಂತರ ತಿಳಿಸಿ.

ಬಿಸಿಬೇಳೆಭಾತ್:
ಬೇಕಾಗುವ ಸಾಮಗ್ರಿಗಳು:

ಅಕ್ಕಿ - ಒಂದು ಬಟ್ಟಲು
ತೊಗರಿಬೇಳೆ - ಒಂದು ಬಟ್ಟಲು
ತರಕಾರಿ ಉಪಯೋಗಿಸುವುದಾದರೆ-
ಕ್ಯಾರೆಟ್,ಬೀನ್ಸ್,ಆಲೂಗೆಡ್ಡೆ,ಟಮೋಟ ಮತ್ತು ಬಟಾಣಿ
ಈರುಳ್ಳಿ ಸ್ವಲ್ಪ ಹೆಚ್ಚಿದ್ದು
ಹುಣಸೇರಸ
ಬೆಲ್ಲ ಚೂರು
ಅರಿಶಿನ
ಉಪ್ಪು

ಬಿಸಿಬೇಳೆ ಭಾತಿನ ಪುಡಿ ತಯಾರಿಸಲು ಸಾಮಗ್ರಿಗಳು

ಒಣಮೆಣಸಿನಕಾಯಿ -ಹತ್ತು /ರುಚಿಗೆ
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-
ಲವಂಗ
ಚೆಕ್ಕೆ
ಮೆಣಸು ಮತ್ತು
ಒಣಕೊಬ್ಬರಿ

ಒಗ್ಗರಣೆಗೆ ಸಾಮಗ್ರಿಗಳು:
ಎಣ್ಣೆ,ತುಪ್ಪ,ಸಾಸಿವೆ,ಜೀರಿಗೆ,ಇಂಗು,ಕರಿಬೇವು
ಒಣಮೆಣಸಿನಕಾಯಿ
ಗೋಡಂಬಿ

ತಯಾರಿಸುವ ವಿಧಾನ:

• ತರಕಾರಿಗಳನ್ನು ಉಪಯೋಗಿಸುವುದಾದರೆ, ಸಣ್ಣಗೆ ಹೆಚ್ಚಿಕೊಳ್ಳಿ.
• ಬಟಾಣಿ ಮತ್ತು ಹೆಚ್ಚಿದ ತರಕಾರಿಗಳನ್ನು , ಅಕ್ಕಿ ಮತ್ತು ತೊಗರಿಬೇಳೆಯನ್ನು ,ನೀರು,ಒಂದು ಚಮಚ ಎಣ್ಣೆ, ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ ಎಲ್ಲವನ್ನು ಸೇರಿಸಿ. ಕುಕ್ಕರ್ ನಲ್ಲಿ ಇಟ್ಟು ಕುಕ್ ಮಾಡಿಕೊಳ್ಳಿ. ನೀರನ್ನು ಮಾಮುಲಿಗಿಂತ ಸ್ವಲ್ಪ ಜಾಸ್ತಿ ಹಾಕಿ.

• ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.

• ಬೇಯಿಸಿರುವ ಅಕ್ಕಿ ಮತ್ತು ಬೇಳೆ ಮಿಶ್ರಣವನ್ನು ತೆಗೆದು. ಸ್ವಲ್ಪ ಲಘುವಾಗಿ ಚೆನ್ನಾಗಿ ಬೆರೆಸಿಡಿ. ನೀರು ಹಾಕಿ ಸ್ವಲ್ಪ ತೆಳುವಾಗಿರಲಿ.
• ಈಗ ಕೊನೆಯ ಹಂತ ಒಂದು ಅಗಲ ಪಾತ್ರೆಗೆ ಒಗ್ಗರಣೆಗೆ ಸಾಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು ಹಾಕಿ ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಇಂಗು, ಒಣಮೆಣಸಿನಕಾಯಿ ಮುರಿದು ಹಾಕಿ, ನಂತರ ಕರಿಬೇವಿನ ಸೊಪ್ಪು ಹಾಕಿದ ಮೇಲೆ ಸ್ವಲ್ಪ ನೀರು ಹಾಕಿ, ಅದಕ್ಕೆ ಪುಡಿ ಮಾಡಿಟ್ಟುಕೊಂಡಿರುವ ಮಸಾಲ ಪುಡಿಯನ್ನು ಹಾಕಿ. ಒಂದೆರಡು ನಿಮಿಷ ಕುದಿಸಿ. ನಂತರ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ, ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ತಿರುಗಿಸಿ. ತುಪ್ಪದಲ್ಲಿ ಕರಿದ ಗೋಡಂಬಿಗಳನ್ನು ಸೇರಿಸಿ. ಉಪ್ಪು,ಕಾರ ಮತ್ತು ಭಾತಿನ ಹದ ನಿಮ್ಮ ಇಷ್ಟದಂತೆ ತಯಾರಿಸಿಕೊಳ್ಳಿ.
• ಎಲ್ಲವನ್ನು ಬೆರೆಸಿದ ಮೇಲೆ ಒಂದು ಕುದಿ ಕುದಿಸಿ, ಇಳಿಸಿ.

• ರುಚಿರುಚಿಯಾದ ಬಿಸಿಬೇಳೆಭಾತ್ ತಿನ್ನಲು ತಯಾರಾಗುತ್ತದೆ. ಈ ಭಾತ್ ಗೆ ಖಾರಬೂಂದಿ ಚೌ-ಚೌ ಮತ್ತು ಆಲೂಗೆಡ್ಡೆ ಚಿಪ್ಸ್ ಚೆನ್ನಾಗಿರುತ್ತದೆ. ಅಲ್ಲದೇ ರಾಯತ, ತರಕಾರಿ ಸಲಾಡ್ ಮತ್ತು ಬಜ್ಜಿಗಳನ್ನು ಜೊತೆಯಲ್ಲಿ ನೀಡಬಹುದು.ಬಿಸಿಯಾದ ಭಾತ್ ಮೇಲೆ ತುಪ್ಪವನ್ನು ಹಾಕಿಕೊಂಡರೆ ರುಚಿ ಹೆಚ್ಚುತ್ತದೆ.
* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.ಧನಿಯಬೀಜದ ಬದಲು,ಧನಿಯಪುಡಿ ಸಹ ಬಳಸಬಹುದು. ಆದರೂ ಮೆಣಸಿನಕಾಯಿ ಮತ್ತು ಧನಿಯವನ್ನು ಪ್ರೆಶ್ ಆಗಿ ಹುರಿದು ಪುಡಿ ಮಾಡಿಕೊಂಡರೆ,ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ.ಮಸಾಲೆ ಪುಡಿ ಮತ್ತು ಬಾತ್ ಕೂಡ ಘಮ ಘಮ ವಾಸನೆ ಬರುತ್ತದೆ.
* ಅಕ್ಕಿ ಮತ್ತು ಬೇಳೆಯನ್ನು ಬೇರೆಯಾಗಿ ಬೇಯಿಸಿಕೊಂಡು ಸಹ ಸೇರಿಸಬಹುದು.
* ತರಕಾರಿಗಳು ಇಷ್ಟಪಡುವವರು ಇದಕ್ಕೆ ಸೇರಿಸಿಕೊಳ್ಳಬಹುದು. ಇಲ್ಲವೆಂದರೆ ಬೇಡಾ! ಹಾಕಲೇ ಬೇಕು ಅಂತ ಏನಿಲ್ಲ.
* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.
* ಈ ರೀತಿ ಅಡಿಗೆಗಳಿಗೆ ಫ್ರೆಶ್ ಆಗಿ ತಯಾರಿಸಿಕೊಂಡ ಪುಡಿಗಳು ಉತ್ತಮ.
* ಈ ಭಾತ್ ತಣ್ಣಗಾದಾಗ ಬೇಗ ಗಟ್ಟಿಯಾಗುತ್ತದೆ. ಆಗಾಗಿ ಬಿಸಿ ಇದ್ದಾಗ ತಿಂದರೆ ತುಂಬಾ ಚೆನ್ನಾಗಿರುತ್ತದೆ. ತಣ್ಣಗೆ ಗಟ್ಟಿಯಾದಾಗ ಅದಕ್ಕೆ ಮತ್ತೆ ಒಂದು ಲೋಟ ಬಿಸಿಯಾದ ನೀರು ಹಾಕಿ, ಚೆನ್ನಾಗಿ ಬೆರೆಸಿ, ಕುದಿಸಿ.

Wednesday, September 5, 2007

Erulli bajji / Onion bajji-ಈರುಳ್ಳಿ ಬಜ್ಜಿ:

ಈರುಳ್ಳಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಈರುಳ್ಳಿ ಸ್ವಲ್ಪ ದೊಡ್ಡದು
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಚಿಟಿಕೆ ಸೋಡ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಸ್ವಲ್ಪ ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:


ಈರುಳ್ಳಿಯನ್ನು ಸ್ಲೈಸ್ ಮಾಡಿಕೊಳ್ಳಿ, ಅದು ಬೇರೆಬೇರೆಯಾಗದಂತೆ ಸರಿಯಾಗಿ ಇಟ್ಟುಕೊಳ್ಳಿ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಅಚ್ಚಖಾರದ ಪುಡಿ,ಉಪ್ಪು,ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಈರುಳ್ಳಿ ಬಿಲ್ಲೆಗಳನ್ನು ಕಲೆಸಿರುವ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಬಂಗಾರಬಣ್ಣ ಬರುವವರೆಗೂ ಬೇಯಿಸಿ, ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಈರುಳ್ಳಿ ಬಜ್ಜಿ ತಿನ್ನಲು ತಯಾರಾಗಿದೆ. ಇದನ್ನು ಬಿಸಿಯಾಗಿ ತಿಂದರೆ ಗರಿಗರಿಯಾಗಿ ತುಂಬಾ ಚೆನ್ನಾಗಿ ಇರುತ್ತದೆ. ಕಾಯಿಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಚಟ್ನಿಯೊಂದಿಗೆ ಇನ್ನೂ ರುಚಿ ಹೆಚ್ಚುತ್ತದೆ.

Popular Posts