ಬಿಸಿಬೇಳೆಭಾತ್:
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಒಂದು ಬಟ್ಟಲು
ತೊಗರಿಬೇಳೆ - ಒಂದು ಬಟ್ಟಲು
ತರಕಾರಿ ಉಪಯೋಗಿಸುವುದಾದರೆ-
ಕ್ಯಾರೆಟ್,ಬೀನ್ಸ್,ಆಲೂಗೆಡ್ಡೆ,ಟಮೋಟ ಮತ್ತು ಬಟಾಣಿ
ಈರುಳ್ಳಿ ಸ್ವಲ್ಪ ಹೆಚ್ಚಿದ್ದು
ಹುಣಸೇರಸ
ಬೆಲ್ಲ ಚೂರು
ಅರಿಶಿನ
ಉಪ್ಪು
ಬಿಸಿಬೇಳೆ ಭಾತಿನ ಪುಡಿ ತಯಾರಿಸಲು ಸಾಮಗ್ರಿಗಳು
ಒಣಮೆಣಸಿನಕಾಯಿ -ಹತ್ತು /ರುಚಿಗೆ
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-
ಲವಂಗ
ಚೆಕ್ಕೆ
ಮೆಣಸು ಮತ್ತು
ಒಣಕೊಬ್ಬರಿ
ಒಗ್ಗರಣೆಗೆ ಸಾಮಗ್ರಿಗಳು:
ಎಣ್ಣೆ,ತುಪ್ಪ,ಸಾಸಿವೆ,ಜೀರಿಗೆ,ಇಂಗು,ಕರಿಬೇವು
ಒಣಮೆಣಸಿನಕಾಯಿ
ಗೋಡಂಬಿ
ತಯಾರಿಸುವ ವಿಧಾನ:
• ತರಕಾರಿಗಳನ್ನು ಉಪಯೋಗಿಸುವುದಾದರೆ, ಸಣ್ಣಗೆ ಹೆಚ್ಚಿಕೊಳ್ಳಿ.
• ಬಟಾಣಿ ಮತ್ತು ಹೆಚ್ಚಿದ ತರಕಾರಿಗಳನ್ನು , ಅಕ್ಕಿ ಮತ್ತು ತೊಗರಿಬೇಳೆಯನ್ನು ,ನೀರು,ಒಂದು ಚಮಚ ಎಣ್ಣೆ, ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ ಎಲ್ಲವನ್ನು ಸೇರಿಸಿ. ಕುಕ್ಕರ್ ನಲ್ಲಿ ಇಟ್ಟು ಕುಕ್ ಮಾಡಿಕೊಳ್ಳಿ. ನೀರನ್ನು ಮಾಮುಲಿಗಿಂತ ಸ್ವಲ್ಪ ಜಾಸ್ತಿ ಹಾಕಿ.
• ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.
• ಬೇಯಿಸಿರುವ ಅಕ್ಕಿ ಮತ್ತು ಬೇಳೆ ಮಿಶ್ರಣವನ್ನು ತೆಗೆದು. ಸ್ವಲ್ಪ ಲಘುವಾಗಿ ಚೆನ್ನಾಗಿ ಬೆರೆಸಿಡಿ. ನೀರು ಹಾಕಿ ಸ್ವಲ್ಪ ತೆಳುವಾಗಿರಲಿ.
• ಈಗ ಕೊನೆಯ ಹಂತ ಒಂದು ಅಗಲ ಪಾತ್ರೆಗೆ ಒಗ್ಗರಣೆಗೆ ಸಾಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು ಹಾಕಿ ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಇಂಗು, ಒಣಮೆಣಸಿನಕಾಯಿ ಮುರಿದು ಹಾಕಿ, ನಂತರ ಕರಿಬೇವಿನ ಸೊಪ್ಪು ಹಾಕಿದ ಮೇಲೆ ಸ್ವಲ್ಪ ನೀರು ಹಾಕಿ, ಅದಕ್ಕೆ ಪುಡಿ ಮಾಡಿಟ್ಟುಕೊಂಡಿರುವ ಮಸಾಲ ಪುಡಿಯನ್ನು ಹಾಕಿ. ಒಂದೆರಡು ನಿಮಿಷ ಕುದಿಸಿ. ನಂತರ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ, ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ ಎಲ್ಲವೂ ಸರಿಯಾಗಿ ಹೊಂದಿಕೊಳ್ಳುವಂತೆ ತಿರುಗಿಸಿ. ತುಪ್ಪದಲ್ಲಿ ಕರಿದ ಗೋಡಂಬಿಗಳನ್ನು ಸೇರಿಸಿ. ಉಪ್ಪು,ಕಾರ ಮತ್ತು ಭಾತಿನ ಹದ ನಿಮ್ಮ ಇಷ್ಟದಂತೆ ತಯಾರಿಸಿಕೊಳ್ಳಿ.
• ಎಲ್ಲವನ್ನು ಬೆರೆಸಿದ ಮೇಲೆ ಒಂದು ಕುದಿ ಕುದಿಸಿ, ಇಳಿಸಿ.
• ರುಚಿರುಚಿಯಾದ ಬಿಸಿಬೇಳೆಭಾತ್ ತಿನ್ನಲು ತಯಾರಾಗುತ್ತದೆ. ಈ ಭಾತ್ ಗೆ ಖಾರಬೂಂದಿ ಚೌ-ಚೌ ಮತ್ತು ಆಲೂಗೆಡ್ಡೆ ಚಿಪ್ಸ್ ಚೆನ್ನಾಗಿರುತ್ತದೆ. ಅಲ್ಲದೇ ರಾಯತ, ತರಕಾರಿ ಸಲಾಡ್ ಮತ್ತು ಬಜ್ಜಿಗಳನ್ನು ಜೊತೆಯಲ್ಲಿ ನೀಡಬಹುದು.ಬಿಸಿಯಾದ ಭಾತ್ ಮೇಲೆ ತುಪ್ಪವನ್ನು ಹಾಕಿಕೊಂಡರೆ ರುಚಿ ಹೆಚ್ಚುತ್ತದೆ.
* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.ಧನಿಯಬೀಜದ ಬದಲು,ಧನಿಯಪುಡಿ ಸಹ ಬಳಸಬಹುದು. ಆದರೂ ಮೆಣಸಿನಕಾಯಿ ಮತ್ತು ಧನಿಯವನ್ನು ಪ್ರೆಶ್ ಆಗಿ ಹುರಿದು ಪುಡಿ ಮಾಡಿಕೊಂಡರೆ,ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ.ಮಸಾಲೆ ಪುಡಿ ಮತ್ತು ಬಾತ್ ಕೂಡ ಘಮ ಘಮ ವಾಸನೆ ಬರುತ್ತದೆ.
* ಅಕ್ಕಿ ಮತ್ತು ಬೇಳೆಯನ್ನು ಬೇರೆಯಾಗಿ ಬೇಯಿಸಿಕೊಂಡು ಸಹ ಸೇರಿಸಬಹುದು.
* ತರಕಾರಿಗಳು ಇಷ್ಟಪಡುವವರು ಇದಕ್ಕೆ ಸೇರಿಸಿಕೊಳ್ಳಬಹುದು. ಇಲ್ಲವೆಂದರೆ ಬೇಡಾ! ಹಾಕಲೇ ಬೇಕು ಅಂತ ಏನಿಲ್ಲ.
* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.
* ಈ ರೀತಿ ಅಡಿಗೆಗಳಿಗೆ ಫ್ರೆಶ್ ಆಗಿ ತಯಾರಿಸಿಕೊಂಡ ಪುಡಿಗಳು ಉತ್ತಮ.
* ಈ ಭಾತ್ ತಣ್ಣಗಾದಾಗ ಬೇಗ ಗಟ್ಟಿಯಾಗುತ್ತದೆ. ಆಗಾಗಿ ಬಿಸಿ ಇದ್ದಾಗ ತಿಂದರೆ ತುಂಬಾ ಚೆನ್ನಾಗಿರುತ್ತದೆ. ತಣ್ಣಗೆ ಗಟ್ಟಿಯಾದಾಗ ಅದಕ್ಕೆ ಮತ್ತೆ ಒಂದು ಲೋಟ ಬಿಸಿಯಾದ ನೀರು ಹಾಕಿ, ಚೆನ್ನಾಗಿ ಬೆರೆಸಿ, ಕುದಿಸಿ.
No comments:
Post a Comment