Wednesday, July 16, 2008

ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:CarrotCabbageSalad


ಕ್ಯಾರೆಟ್ ಮತ್ತು ಎಲೆಕೋಸು ಸಲಾಡ್:


ಕ್ಯಾರೆಟ್ - ಒಂದು ಬಟ್ಟಲು
ಕ್ಯಾಬೇಜ್-ಒಂದು ಬಟ್ಟಲು
ಮಯನ್ನೈಸ್- ಎರಡು ದೊಡ್ಡ ಚಮಚ
ವಿನಿಗರ್-ಕಾಲು ಚಮಚ
ಮೆಣಸಿನಪುಡಿ
ಚಿಲ್ಲಿ ಸಾಸ್
ಕೊತ್ತುಂಬರಿಸೊಪ್ಪು
ಉಪ್ಪು

ವಿಧಾನ:
ಕ್ಯಾರೆಟ್ ಮತ್ತು ಎಲೆಕೋಸು ತುರಿದುಕೊಳ್ಳಿ. ಅದಕ್ಕೆ ಮಯೊನ್ನೈಸ್(Mayonnaise),ಚಿಲ್ಲಿ ಸಾಸ್,ವಿನಿಗರ್,ಉಪ್ಪು ಮತ್ತು ಕಾಳುಮೆಣಸಿನಪುಡಿ,ಕೊತ್ತುಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಇದು ತುಂಬ ಟೇಸ್ಟೀ ಆಗಿರುತ್ತದೆ.

Friday, July 11, 2008

Sweet ShankaraPoli / ಸಿಹಿ ಶಂಕರ ಪೋಳಿ

ಸಿಹಿ ಶಂಕರ ಪೋಳಿ:

ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಬಟ್ಟಲು
ಸಕ್ಕರೆ ಪುಡಿ ಎರಡು ದೊಡ್ಡ ಚಮಚ/ರುಚಿಗೆ
ಡಾಲ್ಡ / ಬೆಣ್ಣೆ / ತುಪ್ಪ- ಸ್ವಲ್ಪ
ಎಣ್ಣೆ ಕರಿಯಲು


ವಿಧಾನ:

ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿಕೊಂಡು ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಹಿಟ್ಟಿನಿಂದ ಕಿತ್ತಳೆಗಾತ್ರದ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪಾತಿಯಂತೆ ಮಣೆ ಮೇಲೆ ಲಟ್ಟಿಸಿ ಸ್ವಲ್ಪ ತೆಳುವಾಗಿರಲಿ. ಆಮೇಲೆ ಅದನ್ನು ಚಾಕು ಅಥವಾ ಕಟ್ಟರ್ ನಿಂದ ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ತೆಗೆದು ಹಾಕಿ. ಬಾಣಲೆಗೆ ಎಷ್ಟು ಹಿಡಿಸುತ್ತದೋ ಅಷ್ಟು ಹಾಕಿ, ಅವೆಲ್ಲವೂ ಚೆನ್ನಾಗಿ ಬೆಂದು ಮೇಲೆ ತೇಲುತ್ತವೆ, ಮತ್ತೆ ತಿರುಗಿಸಿ, ಬೇಗ ಬೇಯುತ್ತದೆ, ಆಗಾಗಿ ಉರಿ ನೋಡಿಕೊಳ್ಳಿ. ತೆಳು ಕಂದು ಬಣ್ಣ ಬಂದ ನಂತರ ಬೇಗ ಎಲ್ಲವನ್ನು ತೆಗೆದು, ಎಣ್ಣೆ ಹೀರಿಕೊಳ್ಳಲು ಪೇಪರ್ ಟವಲ್ ಮೇಲೆ ಹಾಕಿ. ಅದೇ ರೀತಿ ಎಲ್ಲವನ್ನು ತಯಾರಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ. ಇದು ಯಾವಾಗ ಬೇಕಾದರು ತಿನ್ನಲು ರುಚಿಯಾಗಿರುತ್ತದೆ. ಎಷ್ಟು ದಿನ ಬೇಕಾದರೂ ಇಡಬಹುದು.ಸ್ವಲ್ಪ ಸಿಹಿ ಬಿಸ್ಕತ್ ತರಹ ಬರುವುದರಿಂದ ರುಚಿ ಚೆನ್ನಾಗಿರುತ್ತದೆ, ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Monday, June 30, 2008

Carrot Salad / Gajjari kosumbari

ಕ್ಯಾರೆಟ್ ಕೋಸುಂಬರಿ:

ಸಾಮಗ್ರಿಗಳು:

ಕ್ಯಾರೆಟ್ ತುರಿದಿದ್ದು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನ ಕಾಯಿ ಪೇಸ್ಟ್ ಅಥವ ಸಣ್ಣಗೆ ಹೆಚ್ಚಿದ್ದು
ಕಾಯಿತುರಿ ಬೇಕಾದರೆ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ

ಉಪ್ಪು ಮಾತ್ರ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಉಪ್ಪನ್ನು ನೀಡುವಾಗ ಬೆರೆಸಿ ಕೊಡಿ. ಇದು ಅತೀ ಸುಲಭ ಕೋಸುಂಬರಿ ಮತ್ತು ರುಚಿ ಕೂಡ ಹಾಗೂ ಹಸಿಯಾಗಿ ಕ್ಯಾರೆಟ್ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ.

Thursday, June 19, 2008

Vegetable Curry/Saagu - ತರಕಾರಿ ಸಾಗು:


ತರಕಾರಿ ಸಾಗು:

ಸಾಮಗ್ರಿಗಳು:

ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು,ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ಼್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು

ವಿಧಾನ:

ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು,ಹೆಚ್ಚಿದ ತರಕಾರಿಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ,ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ,ಚೆನ್ನಾಗಿ ತಿರುಗಿಸಿ,ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ,ಗರಂಮಸಾಲ ಸಹ ಹಾಕಿ ತಿರುಗಿಸಿ.ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು.ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ. ಇದನ್ನು ಚಪಾತಿ,ಪೂರಿ,ಪರೋಟ ಮತ್ತು ದೋಸೆಯೊಂದಿಗೆ ಸಹ ತಿನ್ನಬಹುದು. ಅನ್ನಕ್ಕು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗೆ ಸಾಗು ಅನ್ನ ಇಷ್ಟವಾಗುತ್ತದೆ. ಯಾವುದಕ್ಕಾದರೂ ಸರಿ ಇಲ್ಲವೆಂದರೆ ಊಟಕ್ಕೂ ಕೂಡ ನೆಂಚಿಕೊಳ್ಳಬಹುದು.

*ಎಲ್ಲಾ ತರಕಾರಿಗಳು ಬೇಕೇಬೇಕು ಅಂತ ಏನು ಇಲ್ಲ. ಕೆಲವು ನಿಮಗೆ ಬೇಕೆನಿಸಿದಂತೆ ಹಾಕಿಕೊಳ್ಳಬಹುದು.

Sunday, June 15, 2008

ಕಡ್ಲೆಕಾಳು ಹುಳಿ / Sprouted Channa Masala Curry


ಕಡ್ಲೆಕಾಳಿನ ಮಸಾಲೆ ಸಾರು/ ಕಡ್ಲೆಕಾಳು ಹುಳಿ:

ಬೇಕಾಗುವ ಸಾಮಗ್ರಿಗಳು:

ಕಪ್ಪು / ಕೆಂಪು ಕಡಲೆಕಾಳು- ಒಂದು ಬಟ್ಟಲು
ತೆಂಗಿನಕಾಯಿ -ಅರ್ಧ ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು,ಮೆಣಸು
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ (ಬೇಕಾದರೆ- ಆಲೂಗೆಡ್ಡೆ,ಬದನೆಕಾಯಿ,ಹೂಕೋಸು)
ಟಮೋಟೊ - ಎರಡು,ಹೆಚ್ಚಿಕೊಳ್ಳಿ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

ಕಡಲೆಕಾಳನ್ನು ಚೆನ್ನಾಗಿ ತೊಳೆದು,ಹಿಂದಿನ ರಾತ್ರಿ ನೆನೆಸಿ,ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.
*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.

ಮಸಾಲೆ ತಯಾರಿಸಲು:
ಈರುಳ್ಳಿಯನ್ನು ಸುಮಾರಾಗಿ ಹೆಚ್ಚಿಕೊಂಡು ಅದನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಒಂದು ಚಮಚ ಎಣ್ಣೆಯನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ,ಏಲಕ್ಕಿ,ಮೊಗ್ಗು,ಮೆಣಸು,ಹಸಿಮೆಣಸಿನಕಾಯಿ,ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಹುರಿಗಡಲೆ,ಅಚ್ಚಖಾರದ ಪುಡಿ,ಧನಿಯಾಪುಡಿ,ಗಸಗಸೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು, ಕಾಳುಗಳನ್ನು ಹಾಕಿ ಅದನ್ನು ಐದು/ಆರು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ನೀರು ಹಾಕಿ ಮುಚ್ಚಿಟ್ಟು ಬೇಯಿಸಿ.ಕಾಳುಗಳು ಬೇಯುವವರೆಗು ಬೇಯಿಸಿ.ಇಳಿಸಿ.ಕಡ್ಲೆಕಾಳು ಹುಳಿ ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಜೀರಾ ರೈಸ್ ,ಚಪಾತಿ,ಪೂರಿ,ಪರೋಟ ಅಥವಾ ರೊಟ್ಟಿ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಬೇರೆ ಸೈಡ್ ಡಿಶ್ ಗಾದರೆ ಗಟ್ಟಿಯಾಗಿ ತಯಾರಿಸಿ. ಮಕ್ಕಳಿಗೆ ಈ ಕಡ್ಲೆಕಾಳು ಸಾರು ತುಂಬಾ ಇಷ್ಟವಾಗುತ್ತದೆ.

Saturday, June 14, 2008

CabbageBeansBassaaru-ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:

ಕೋಸು-ಬೀನ್ಸ್ ಬಸ್ಸಾರು ಮತ್ತು ಪಲ್ಯ:
ಸಾರಿಗೆ ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಏಳೆಂಟು ಕಾಳು
ಅರಿಸಿನದಪುಡಿ
ಹುಣಸೆಹಣ್ಣು ಅಥವಾ ಹುಣಸೆರಸ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ
ತಯಾರಿಸುವವಿಧಾನ:

ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರೆಬೇಳೆಯನ್ನು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಬೇಳೆ ಬೇಯಲು ಬಿಡಿ.ಬೇಳೆ ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ,ಬೇಳೆ ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ,ನಂತರ ಬೇಳೆ ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಬೇಳೆ ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಬೇಳೆ ಮತ್ತು ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ,ಜೀರಿಗೆ,ಅಚ್ಚಖಾರದಪುಡಿ,ಮೆಣಸು,ಸಾರಿನಪುಡಿ,ಹುಣಸೆಹಣ್ಣು,ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ,ನುಣ್ಣಗೆ ರುಬ್ಬಿಕೊಳ್ಳಿ.
ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ ಮತ್ತು ಜೀರಿಗೆ ಹಾಕಿ,ಕರಿಬೇವು,ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ,ಬಸಿದಿಟ್ಟುಕೊಂಡ ಸಾರಿನಕಟ್ಟನ್ನು ಹಾಕಿ,ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ.'ಬಸ್ಸಾರು' ತಯಾರು.
ಈಗ ಬೇಳೆ-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ,ಸಾಸಿವೆ,ಕರಿಬೇವು,ಜಜ್ಜಿದ ಬೆಳ್ಳುಳ್ಳಿ,ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಬೇಳೆ ಮಿಶ್ರಣವನ್ನು ಹಾಕಿ,ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. 'ಪಲ್ಯ' ತಯಾರು.
* ಹುಣಸೆಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೆರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ,ಕುದಿಸಿ,ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು,ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು,ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

Thursday, June 12, 2008

Curd raita / mosaru bajji

ಮೊಸರು ಬಜ್ಜಿ / ರಾಯತ:

ಮೊಸರು ಒಂದು ಬಟ್ಟಲು
ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ
ಟಮೋಟೋ ಹೆಚ್ಚಿದ್ದು
ಸೌತೆಕಾಯಿ ತುರಿ ಸ್ವಲ್ಪ
ಹಸಿಮೆಣಸಿನಕಾಯಿ ಒಂದು, ಸೀಳಿದ್ದು
ಹೆಚ್ಚಿದ ಕೊತ್ತುಂಬರಿ ಮತ್ತು ಪುದೀನ ಸೊಪ್ಪು
ಉಪ್ಪು

ತಯಾರಿಸುವ ವಿಧಾನ:

ಇವೆಲ್ಲವನ್ನೂ ಗಟ್ಟಿಯಾದ ಮೊಸರಿನೊಂದಿಗೆ ಬೆರೆಸಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪಲಾವ್ /ಬಾತ್ ಅಥವಾ ಯಾವ ಊಟಕ್ಕಾದರೂ ಸೈಡ್ ಡಿಶ್ ಆಗಿ ಸರ್ವ್ ಮಾಡಿ.

Tuesday, May 27, 2008

Sambar - ಸಾಂಬಾರ್ / ಇಡ್ಲಿ ಸಾಂಬಾರ್-Idli Sambar


ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ. ಕೆಲವು ಸಾರಿ ಇಡ್ಲಿ - ಸಾಂಬಾರ್ ಜೊತೆ ರುಚಿ ಎನಿಸಿದರೆ, ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.

Friday, May 16, 2008

Radish Tomato Salad/ಮೂಲಂಗಿ ಟಮೋಟ ಸಲಾಡ್

ಮೂಲಂಗಿ ಟಮೋಟ ಸಲಾಡ್:


ಮೂಲಂಗಿ
ಟಮೋಟ
ಸೌತೆಕಾಯಿ
ಈರುಳ್ಳಿ
ಕ್ಯಾರೆಟ್ ತುರಿ
ಕಾಯಿತುರಿ (ಬೇಕಾದರೆ)
ಕಾರದ ಪುಡಿ
ನಿಂಬೆರಸ
ಕಾಲು ಟೀ ಚಮಚ ವಿನಿಗರ್
ಕೊತ್ತುಂಬರಿಸೊಪ್ಪು
ಉಪ್ಪು

ಹೆಚ್ಚಿದ ಟಮೋಟ,ಹೆಚ್ಚಿದ ಮೂಲಂಗಿ,ಹೆಚ್ಚಿದ ಈರುಳ್ಳಿ,ಸೌತೆಕಾಯಿ ಹೆಚ್ಚಿದ್ದು,ಕಾರದಪುಡಿ,ನಿಂಬೆರಸ,ಕಾಲು ಟೀ ಚಮಚ ವಿನಿಗರ್,ಕಾಯಿತುರಿ,ಉಪ್ಪು ಮತ್ತು ಕೊತ್ತುಂಬರಿ ಸೊಪ್ಪು ಎಲ್ಲಾ ಬೆರೆಸಿ.ಸಲಾಡ್ ರೆಡಿ.

Wednesday, May 14, 2008

Masala Papad /happala - ಮಸಾಲೆ ಹಪ್ಪಳ


ಮಸಾಲೆ ಹಪ್ಪಳ:
ಹಪ್ಪಳ
ಹೆಚ್ಚಿದ ಈರುಳ್ಳಿ
ಕಾಯಿತುರಿ
ಕಾರದ ಪುಡಿ
ಉಪ್ಪು
ಹಸಿಮೆಣಸಿನಕಾಯಿ (ಬೇಕಾದರೆ)
ಕೊತ್ತುಂಬರಿ ಸೊಪ್ಪು

ವಿಧಾನ:
ಹಪ್ಪಳವನ್ನು ಎಣ್ಣೆಯಲ್ಲಿ ಕರೆದಿಟ್ಟುಕೊಂಡು ಅದರ ಮೇಲೆ ಹೆಚ್ಚಿದ ಈರುಳ್ಳಿ, ಕಾಯಿತುರಿ, ಕಾರದಪುಡಿ ಮತ್ತು ಉಪ್ಪು ಉದುರಿಸಿ. ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ, ಚಾಟ್ ಮಸಾಲಾ ಸಿಂಪಡಿಸಿ, ತಕ್ಷಣ ತಿನ್ನಲು ಕೊಡಿ , ಹಪ್ಪಳ ಬೇಗ ಮೆತ್ತಗೆ ಆಗುತ್ತದೆ.
* ಮೊಳಕೆ ಹೆಸರುಕಾಳು ಇದ್ದರೆ ಅದನ್ನು ಸೇರಿಸಿದರೆ, ಇನ್ನೂ ರುಚಿ ಹೆಚ್ಚುತ್ತದೆ.
* ಮಸಾಲೆ ಹಾಕಿದ ಮೇಲೆ ನಿಂಬೆರಸ ಸಹ ಹಿಂಡಬಹುದು.

Tuesday, May 13, 2008

Butter Chakli / ಬೆಣ್ಣೆ ಚಕ್ಕುಲಿ

ಬೆಣ್ಣೆ ಚಕ್ಕುಲಿ:
ಬೇಕಾಗುವ ಸಾಮಗ್ರಿಗಳು:

ಬೆಣ್ಣೆ - ಒಂದು ಬಟ್ಟಲು
ಅಕ್ಕಿಹಿಟ್ಟು- ಒಂದು ಬಟ್ಟಲು
ಕಡ್ಲೆಹಿಟ್ಟು - ಒಂದು ಬಟ್ಟಲು
ಹುರಿಗಡಲೆ ಹಿಟ್ಟು - ಒಂದು ಬಟ್ಟಲು
ಮೈದಾಹಿಟ್ಟು - ಒಂದು ಬಟ್ಟಲು
ಅಚ್ಚಕಾರದ ಪುಡಿ - ಎರಡು ಚಮಚ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆ
ಚಿಟಿಕೆ ಅಡಿಗೆಸೋಡ
ಎಳ್ಳು ಸ್ವಲ್ಪ
ಉಪ್ಪು ರುಚಿಗೆ
ಎಣ್ಣೆ ಕರಿಯಲು

ತಯಾರಿಸುವ ವಿಧಾನ:

ಅಕ್ಕಿಹಿಟ್ಟು,ಕಡ್ಲೆಹಿಟ್ಟು,ಮೈದಾಹಿಟ್ಟು,ಹುರಿಗಡಲೆಹಿಟ್ಟು,ಕಾರದಪುಡಿ,ಜೀರಿಗೆ,ಎಳ್ಳು,ಇಂಗು,ಉಪ್ಪು ಎಲ್ಲಾ ಚೆನ್ನಾಗಿ ಬೆರೆಸಿ, ಅದಕ್ಕೆ ಬೆಣ್ಣೆಯನ್ನು ಮತ್ತು ನೀರನ್ನು ಹಾಕಿ ಕಲೆಸಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಿರಲಿ. ಚೆನ್ನಾಗಿ ನಾದಿ,ಹದವಾಗಿ ಕಲೆಸಿ.ಚಕ್ಕುಲಿಯ ಒರಳಿಗೆ ಹಿಟ್ಟನ್ನು ತುಂಬಿ ಚಕ್ಕುಲಿಯನ್ನು ತಯಾರಿಸಿ.ಕಾದ ಎಣ್ಣೆಗೆ ಒಂದೊಂದಾಗಿ ಹಾಕಿ,ಮಧ್ಯ ಉರಿಯಲ್ಲಿಡಿ, ಎಣ್ಣೆ ಚೆನ್ನಾಗಿ ಕಾದಿರಬೇಕು. ಸ್ವಲ್ಪ ಬೆಂದ ನಂತರ ತಿರುವಿ ಹಾಕಿ, ಎರಡು ಕಡೆ ಬೇಯಿಸಿ. ಚಕ್ಕುಲಿಯ ಬಣ್ಣ ಬಂದ ತಕ್ಷಣ ತೆಗೆಯಿರಿ. ತಣ್ಣಗಾಗಲು ಬಿಟ್ಟು ,ಆಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿ,ಯಾವ ಕಾಲದಲ್ಲಿಯಾದರೂ ಚಕ್ಕುಲಿ ರುಚಿ ಚೆನ್ನ.

Friday, May 9, 2008

Menasinakaayi Bajji-ಮೆಣಸಿನಕಾಯಿ ಬಜ್ಜಿ:


ಮೆಣಸಿನಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:

ಮೆಣಸಿನ ಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಓಮಕಾಳು - ಕಾಲು ಚಮಚ
ಚಿಟಿಕೆ ಸೋಡ
ಅಚ್ಚಖಾರದ ಪುಡಿ
ಉಪ್ಪು
ಕಾದ ಎಣ್ಣೆ - ಒಂದು ಚಮಚ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:


* ಮೆಣಸಿನಕಾಯಿಗಳನ್ನು ಮಧ್ಯಕ್ಕೆ ಸೀಳಿ ಅಥವಾ ತುದಿಯನ್ನು ಕತ್ತರಿಸಿ. ಮೆಣಸಿನಕಾಯಿಯನ್ನು ಹಿಡಿಯಾಗಿ ಹಿಟ್ಟಿನಲ್ಲಿ ಎದ್ದಿ ಎಣ್ಣೆಯಲ್ಲಿ ಹಾಕಿದಾಗ ಅದು ಸಿಡಿಯುತ್ತದೆ, ಅದಕ್ಕಾಗಿ ಸ್ವಲ್ಪ ಮಧ್ಯಕ್ಕೆ ಕತ್ತರಿಸಿ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು,ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ,ಅದಕ್ಕೆ ಕಾದಿರುವ ಎಣ್ಣೆ ಹಾಕಿ,ಜೊತೆಯಲ್ಲಿ ನೀರು ಹಾಕಿ,ಕಲೆಸಿಕೊಳ್ಳಿ,ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು,ಅದು ಕಾದ ನಂತರ ಹೆಚ್ಚಿರುವ ಮೆಣಸಿನಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ,ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ,ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಮೆಣಸಿನಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು.
ಊಟದೊಂದಿಗೆ ನೆಂಚಿಕೊಳ್ಳಲು /ಕಾಫಿ,ಟೀ ಜೊತೆಗೆ/ಬಿಸಿಬೇಳೆ ಬಾತ್ ಗೆ ಒಳ್ಳೆಯ ಕಾಂಬಿನೇಷನ್.

Popular Posts