Tuesday, May 27, 2008

Sambar - ಸಾಂಬಾರ್ / ಇಡ್ಲಿ ಸಾಂಬಾರ್-Idli Sambar


ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ. ಕೆಲವು ಸಾರಿ ಇಡ್ಲಿ - ಸಾಂಬಾರ್ ಜೊತೆ ರುಚಿ ಎನಿಸಿದರೆ, ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.

ಸಾಂಬಾರ್: (ಇಡ್ಲಿ ಸಾಂಬಾರ್)

ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು

ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಬೇಯಿಸಲು ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು


ತಯಾರಿಸುವ ರೀತಿ:

ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.

ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.

No comments:

Popular Posts