ಹೆಸರುಬೇಳೆ ಪಾಯಸ:
ಸಾಮಗ್ರಿಗಳು :
ಹೆಸರುಬೇಳೆ- 1 ಕಪ್,
ಬಾದಾಮಿ - 7-8
ಅಕ್ಕಿ - 1 ಚಮಚ,
ತೆಂಗಿನಕಾಯಿ - 1 ಅಥವ ( ಹಾಲು 5-6 ಕಪ್ )
ಏಲಕ್ಕಿ - 5,
ಸಕ್ಕರೆ/ಬೆಲ್ಲ - 21/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ತಯಾರಿಸುವ ವಿಧಾನ :
ಒಂದು ಕಪ್ ಹೆಸರುಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಘಂ ಎಂದು ಸ್ವಲ್ಪ ಕೆಂಪಗೆ ಆಗುವವರೆಗೂ ಹುರಿಯಿರಿ. ಮೊದಲೇ1 ಟೀ ಚಮಚ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ.1 ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ತೆಂಗಿನ ಕಾಯಿ ಹಾಲನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಡುವಿಲ್ಲ ಅರ್ಜೆಂಟ್ ಆಗಿ ಪಾಯಸ ಮಾಡಬೇಕಾದರೆ ಮಾಮುಲಿ ಗಟ್ಟಿ ಹಾಲನ್ನು ಬಳಸಿ. ಇದು ನಿಮ್ಮ ಅವಶ್ಯಕತೆಗೆ ಸೇರಿದ್ದು. ಹಾಲು ಬೇರೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ.
ತೆಂಗಿನಹಾಲು ತೆಗೆಯಲು ಕಷ್ಟ ಎನಿಸಿದರೆ ಒಣಗಿದ ಕೊಬ್ಬರಿ ತುರಿಯನ್ನು ರುಬ್ಬುವಾಗ ಉಪಯೋಗಿಸಬಹುದು,ಅಥವಾ ರೆಡಿಮೇಡ್ ಕೊಕೋನಟ್ ಮಿಲ್ಕ್ ಉಪಯೋಗಿಸಬಹುದು.
ಮಾಡುವ ವಿಧಾನ :
ಬಾದಾಮಿ, ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಮಿಕ್ಸಿಗೆ ಹಾಕಿರುವ ಪದಾರ್ಥ, ತೆಂಗಿನ ಹಾಲು ಅಥವಾ(ಕಾಯಿಸಿದ ಹಾಲು)ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಹುರಿದ ಹೆಸರುಬೇಳೆಯನ್ನು ಸೇರಿಸಿ ಬೇಳೆ ಬೇಯಲು ಎರಡು ಬಟ್ಟಲು ನೀರು ಹಾಕಿ ಕುದಿಸಬೇಕು. ಹೆಸರುಬೇಳೆ ಬೇಯುವವರೆಗೂ ಚೆನ್ನಾಗಿ ಬೇಯಿಸಿ. ಕುದಿಯುತ್ತಿರುವಾಗಲೆ ಬೆಲ್ಲ ಅಥವ ಸಕ್ಕರೆ ಸೇರಿಸಿ(ಸಕ್ಕರೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ), ಮಧ್ಯೆ ಮಧ್ಯೆ ಕಲಕುತ್ತಿರಬೇಕು. ಬೇಕಾದರೆ ಕುದಿಯುವಾಗ ಒಂದು ಚಿಕ್ಕಚೂರು ಜಾಕಾಯಿ ಅಥವ ಜಾಯಿಕಾಯಿ ರಸ ಮತ್ತು 3-4 ಲವಂಗ ಹಾಕಬಹುದು. ಜೊತೆಯಲ್ಲಿ ಕೇಸರಿ ದಳಗಳನ್ನು 2 ಚಮಚ ಹಾಲಿನಲ್ಲಿ ನೆನಸಿ, ಕುದಿಯುವಾಗ ಹಾಕಿ, ತಳಹತ್ತದಂತೆ ಚೆನ್ನಾಗಿ ಒಂದೆರಡು ಕುದಿ ಕುದಿಸಿ, ಇಳಿಸಿ. ನಂತರ ಅದಕ್ಕೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿ ಹಾಗು ಬಾದಾಮಿಗಳನ್ನು ಹಾಕಬಹುದು. ಇದು ತುಂಬಾ ರುಚಿಯಾದ,ತಂಪು ಮತ್ತು ಶಕ್ತಿದಾಯಕ ಪಾಯಸವೂ ಹೌದು.ಇದೊಂದು ಒಳ್ಳೆಯ ಪೌಷ್ಠಿಕ ಪಾನೀಯ.
No comments:
Post a Comment