ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - ಒಂದು ಕಪ್
ಗೋಧಿಹಿಟ್ಟು - ಒಂದು ಕಪ್
ತೆಂಗಿನತುರಿ ಅಥವ ಕೊಬ್ಬರಿ ತುರಿ - ಎರಡು ಕಪ್
ಗಸಗಸೆ - ಎರಡು ಚಮಚ
ಅಕ್ಕಿ - ಒಂದು ಚಮಚ
ಸಕ್ಕರೆ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ, ಚಿಟಿಕೆ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
ಎರಡು ಹಿಟ್ಟನ್ನು ಚೆನ್ನಾಗಿ ಬೆರೆಸಿ,ಅದಕ್ಕೆ ಚಿಟಿಕೆ ಉಪ್ಪು ಮತ್ತು ಒಂದು ಚಮಚ ಎಣ್ಣೆ /ತುಪ್ಪ ಹಾಕಿ ಗಟ್ಟಿಯಾಗಿ ಪೂರಿಹಿಟ್ಟಿನ ಹದಕ್ಕೆ ಕಲೆಸಿ, ಚೆನ್ನಾಗಿ ನಾದಿಡಿ. ತುಂಬಾ ಹೊತ್ತು ನೆನೆಸಬೇಡಿ.
ಕೊಬ್ಬರಿ/ತೆಂಗಿನತುರಿಯನ್ನು, ಗಸಗಸೆ, ಅಕ್ಕಿ ಮತ್ತು ಏಲಕ್ಕಿ/ಏಲಕ್ಕಿಪುಡಿಯೊಂದಿಗೆ ಸ್ವಲ್ಪ ನೀರು/ಹಾಲನ್ನು ಹಾಕಿ ರುಬ್ಬಿಕೊಂಡು, ಅದನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಹಾಗೆಯೇ ಒಂದು ಕಪ್ ಹಾಲನ್ನು ಸೇರಿಸಿ, ಸಕ್ಕರೆ ಸಹ ಬೆರೆಸಿ, ಹಸಿವಾಸನೆ ಹೋಗುವವರೆಗೂ ಕುದಿಸಿ ತೆಗೆದಿಡಿ. ಬೇಗ ತಳಹತ್ತುತ್ತದೆ, ಕೈ ಬಿಡದೆ ತಿರುಗಿಸುತ್ತಿರಿ. ತಳಹತ್ತಿದರೆ ವಾಸನೆ ಬರುತ್ತದೆ.

ಕಲೆಸಿರುವ ಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು, ಅದನ್ನು ತೆಳ್ಳಗೆ ಲಟ್ಟಿಸಿ, ದಪ್ಪವಾಗಿ ಲಟ್ಟಿಸಬೇಡಿ. ಪೂರಿಯಷ್ಟು ಅಗಲವಾಗಿ ಒತ್ತಿ. ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಸ್ವಲ್ಪ ಗಟ್ಟಿಯಾಗಿಯೇ ಇದ್ದರೆ ಚೆನ್ನ. ಪೂರಿಯಂತೆ ಊದಿಕೊಳ್ಳದೆ, ಮೆತ್ತಗಿರದೆ, ಗಟ್ಟಿಯಾಗಿರುವಂತೆ ಪೂರಿ ಮಾಡಿಕೊಳ್ಳಿ.
ಈ ಪೂರಿಗಳನ್ನು ಮೊದಲು ತಯಾರಿಸಿದ ಹೂರಣದಲ್ಲಿ ಅದ್ದಿ ತೆಗೆದು,ಜೋಡಿಸಿ ಅದರ ಮೇಲೆ ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ದ್ರಾಕ್ಷಿಯಿಂದ ಅಲಂಕರಿಸಿ.ಬಣ್ಣದ ಕೊಬ್ಬರಿ ತುರಿಯಿಂದ ಕೂಡ ಅಲಂಕರಿಸಿ.
ಹಾಲು ಹೋಳಿಗೆ ತಿನ್ನಲು ತಯಾರಾಗಿರುತ್ತದೆ. ಹೋಳಿಗೆಯ ಮೇಲೆ ಬಿಸಿ ತುಪ್ಪವನ್ನು ಹಾಕಿ ಸವಿಯಲು ನೀಡಿ.
* ಪೂರಿಯನ್ನು ಮೊದಲೆ ತಯಾರಿಸಿ ಇಟ್ಟುಕೊಂಡು, ತಿನ್ನುವಾಗ ಹೂರಣವನ್ನು ಅದರ ಮೇಲೆ ಹಾಕಿಕೊಂಡು ತಿನ್ನಬಹುದು.
* ಸ್ವಲ್ಪ ಮೆತ್ತಗೆ ನೆನೆದಿರಬೇಕೆಂದರೆ, ಮೊದಲೆ ಹೂರಣದಲ್ಲಿ ಅದ್ದಿ ಇಡಬಹುದು, ತುಂಬಾ ಮೆತ್ತಗೆ ಬೇಕಾದವರೂ ಹೂರಣದಲ್ಲಿ ಮುಳಗಿಸಿ ಇಟ್ಟು ತಿನ್ನಬಹುದು. ಒಬ್ಬೊಬ್ಬರ ರುಚಿ ಒಂದೊಂದು ತರಹ ಇರುತ್ತದೆ, ಅವರಿಗೆ ಇಷ್ಟವಿರುವ ರೀತಿಯಲ್ಲಿ ತಯಾರಿಸಿಕೊಳ್ಳಬಹುದು.
*ಹೋಳಿಗೆಯಂತೆ ಬೇರೆ ಬೇರೆ ಬೇಡವೆಂದರೆ, ಹೂರಣವನ್ನು ದೊಡ್ಡಪಾತ್ರೆಯಲ್ಲಿಯೇ ಕುದಿಸಿಟ್ಟುಕೊಂಡು, ಪೂರಿಯನ್ನು ಕರಿಯುತ್ತಿರುವಂತೆಯೇ ಹೂರಣದ ಪಾತ್ರೆಗೆ ಹಾಕಿ, ಒಂದೊಂದಾಗಿ ಬಿಸಿಯಿರುವಂತೆಯೇ ಹಾಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಕೂಡ ಇಡಬಹುದು. ಇದು ಎಲ್ಲವೂ ಬೆರೆತು ಸ್ವಲ್ಪ ಪುಡಿಪುಡಿಯಂತೆ ಇರುತ್ತದೆ.